ಮರಾಠಾ ಸಮುದಾಯಕ್ಕೆ ಜಿಜಾವು ಮಾತಾ ಕೊಡುಗೆ ಅಪಾರ: ಕವಿತಾರೆಡ್ಡಿ

ಬೀದರ: ಜ.25:ಮರಾಠಾ ಸಮುದಾಯಕ್ಕೆ ಜಿಜಾವು ಮಾತಾ ಕೊಡುಗೆ ಅಪಾರವಾಗಿದೆ. ಮಹಿಳೆಯರಿಗೆ ಸ್ಫೂರ್ತಿದಾಯಕರಾಗಿದ್ದ ಜಿಜಾವು ಅವರು ಒಬ್ಬ ಮಹಿಳೆ ಹೇಗೆ ಧೈರ್ಯದಿಂದ ಬದುಕಬೇಕೆಂಬುದನ್ನು ನಮಗೆ ತಿಳಿಸಿಕೊಟ್ಟಿದ್ದಾರೆ ಎಂದು ಬೆಂಗಳೂರಿನ ಸಮಾಜ ಸೇವಕಿ ಕವಿತಾರೆಡ್ಡಿ ತಿಳಿಸಿದರು.
ರಾಜಮಾತಾ ಜಿಜಾವು ಮಾಸಾಹೇಬ್ ಮಹಿಳಾ ಸಮಿತಿ ಬೀದರ ವತಿಯಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಜರುಗಿದ ರಾಜಮಾತಾ ಜಿಜಾವು ಅವರ ಜಯಂತಿ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.
ಜಿಜಾಮಾತಾ ಅವರು ಕೇವಲ ಛತ್ರಪತಿ ಶಿವಾಜಿ ಮಹಾರಾಜರ ತಾಯಿಯಾಗಿರಲಿಲ್ಲ. ಬದಲಾಗಿ ಬಡವರ, ದೀನ ದುರ್ಬಲರ ಹಾಗೂ ನೊಂದವರ ಮಹಾತಾಯಿಯಾಗಿದ್ದರು. ಶಿವಾಜಿ ಮಹಾರಾಜರನ್ನು ವೀರ ಶೂರರ ಕಥೆಗಳನ್ನು ಓದಿಸಿ ಧೈರ್ಯದಿಂದ ಬೆಳೆಸಿದರು. ಶಹಾಜಿ ಭೋಸ್ಲೆಗೆ ಮದುವೆಯಾಗಿ ಸಾಮ್ರಾಜ್ಯ ಮುನ್ನಡೆಸಿದರು. ಅವರ ಆದರ್ಶಗಳನ್ನು ಇಂದಿನ ಮಹಿಳೆಯರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಶೈನಿ ಪ್ರದೀಪ ಗುಂಟಿ ಮಾತನಾಡಿ ಮಾತೆ ಜೀಜಾಮಾತಾ ಅವರ ಜೀವನ ಶೌರ್ಯದ ಜೀವನ ಕುರಿತು ಓದುತ್ತ ಹೋದರೆ ಮೈ ರೋಮಾಂಚನಗೊಳ್ಳುತ್ತದೆ. ಅವರಂತೆ ಇಂದಿನ ಮಹಿಳೆಯರು ವೀರರಾಗಿ ಬದುಕಿ, ಹೋರಾಟಗಳ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನಗಳಿಗೆ ಹೋಗುವ ಪ್ರಯತ್ನ ಮಾಡಬೇಕಾಗಿದೆ. ಇಂದಿಗೂ ಶಿವಾಜಿ ಹಾಗೂ ತಾಯಿ ಜಿಜಾವು ಅವರ ಚರಿತ್ರೆ ಓದುತಿದ್ದೇವೆ. ಆ ರೀತಿ ಇಂದಿನ ಮಹಿಳೆಯರು ಸಾಧನೆ ಮಾಡಬೇಕು. ಮಹಿಳೆಯರಿಗೆ ತೊಂದರೆಯಾದರೆ ಅವರನ್ನು ತಕ್ಷಣವೇ ಕಾಪಾಡಲು ಬೀದರನಲ್ಲಿ ಅಕ್ಕಪಡೆ ಆರಂಭಿಸಲಾಗಿದೆ. ವಿದ್ಯಾರ್ಥಿನಿಯರು ಹಾಗೂ ತಾಯಂದಿರಿಗೆ ತೊಂದರೆಯಾದರೆ ಹೆದರದೆ ತಕ್ಷಣವೇ ಅಕ್ಕಪಡೆ ಸಿಬ್ಬಂದಿಗಳಿಗೆ ತಿಳಿಸಬೇಕೆಂದು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಪೂಜ್ಯ ಶ್ರೀ ದಾದಾ ಮಹಾರಾಜ್ ನಗರಕರ್ ಅವರು ತಮ್ಮ ಆಶಿರ್ವಚನ ನೀಡುತ್ತ ಸಮುದಾಯದ ಎಲ್ಲಾ ಜನತೆ ಐಕ್ಯತೆಯಿಂದ ಬದುಕಬೇಕಾದ ಅವಶ್ಯಕತೆ ಇದೆ. ಒಗ್ಗಟ್ಟಿನಿಂದ ಇದ್ದರೆ ಸಮಾಜ ಅಭಿವೃದ್ಧಿ ಹೊಂದುತ್ತದೆ. ಮರಾಠ ಸಮಾಜದ ಏಳ್ಗೆಗೆ ಪ್ರತಿ ತಿಂಗಳು ನಾನು ಬೀದರ ಜಿಲ್ಲೆಗೆ ಭೇಟಿ ನೀಡುತಿದ್ದೇನೆ ಎಂದು ತಿಳಿಸಿದರು.
ಉಪನ್ಯಾಸಕರಾಗಿ ಆಗಮಿಸಿದ ಮಹಾರಾಷ್ಟ್ರದ ಉಮರ್ಗಾದ ಸಮಾಜ ಸೇವಕಿ ರಂಜನಾ ಹಸೂರೆ ಜಿಜಾವು ಮಾತೆ ಕುರಿತು ಸಮಗ್ರ ಉಪನ್ಯಾಸ ನೀಡಿದರು. ಇದೇ ವೇಳೆ ಸಮಿತಿಯ ಪ್ರಮುಖರಾದ ಪ್ರೇರಣಾ ಭೋಸ್ಲೆ, ಪ್ರತಿಕ್ಷಾ ಪಾಟೀಲ, ರಂಜನಾ ಪಾಟೀಲ, ರೇಖಾ ಜಾಧವ, ಮೀರಾ ಘೂಳೆ, ರೇಖಾ ಪಾಟೀಲ, ಶಶಿಕಲಾ ಬಿರಾದಾರ, ಅನಿತಾ ಭೋಸ್ಲೆ, ಸುರೇಖಾ ಬಿರಾದಾರ, ವಿಜಯಾ ಜಾಧವ, ಶರ್ಮಿಳಾ ಮೆಂದೆ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಾಧ್ಯಾಪಕಿ ಪೆÇ್ರ. ಮೀನಾಕ್ಷಿ ಕಾಳೆ ಸಭೀಕರನ್ನು ಸ್ವಾಗತಿಸಿ ನಿರೂಪಿಸಿದರು. ಮೀನಾಕ್ಷಿ ಪಾಟೀಲ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಪೂಜೆ ಸಲ್ಲಿಸಿದ ಮಹಿಳಾ ಸಮಿತಿ ಪದಾಧಿಕಾರಿಗಳು ಒಂದೆ ತರಹದ ಉಡುಗೆ ತೊಟ್ಟು, ತಲೆ ಮೇಲೆ ಪೇಟಾ ಧರಿಸಿ ಜಯಘೋಷ ಮಾಡುತ್ತ ರಂಗಮಂದಿರವರೆಗೆ ತೆರಳಿದರು.