ಜೇವರಗಿ ಅಪಘಾತ:ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆ

ಕಲಬುರಗಿ,ನ.27: ಜೇವರಗಿ ಪಟ್ಟಣದ ಸಮೀಪ ರಾಷ್ಟ್ರೀಯ ಹೆದ್ದಾರಿ-50 ರಲ್ಲಿ ಮಂಗಳವಾರ ನಡೆದ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಈರಣ್ಣ ಶಿರಸಂಗಿ ಬುಧವಾರ ಮೃತಪಟ್ಟಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ ನಾಲ್ಕಕ್ಕೆ ಏರಿದೆ.
ಈರಣ್ಣ ಶಿರಸಂಗಿ ಅವರ ಸ್ಥಿತಿ ಚಿಂತಾಜನಕವಾಗಿತ್ತು.ಎದೆಯ ಎರಡೂ ಕಡೆಯ ಮೂಳೆಗಳು ಮುರಿದಿದ್ದವು.ರಕ್ತದೊತ್ತಡ ಕುಸಿಯುತ್ತಿತ್ತು.ಅವರಿಗೆ ಎರಡು ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿತ್ತು.ಆದರೂ ಅವರು ಬದುಕಿ ಉಳಿಯಲಿಲ್ಲ.ಅಪಘಾತದಲ್ಲಿ ಗಾಯಗೊಂಡಿದ್ದ ಕಾರು ಚಾಲಕ ಅಂಥೋನಿಯಾ ರಾಜ್ ಆರೋಗ್ಯ ಸ್ಥಿರವಾಗಿದೆ ಎಂದು ಮಣೂರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ದೇಶಕ ಡಾ.ಫಾರೂಕ್ ಮಣೂರ್ ತಿಳಿಸಿದ್ದಾರೆ.
ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಮಂಗಳವಾರ ಮೃತಪಟ್ಟಿದ್ದರು.
ಕಾರು ಅಪಘಾತ ನಡೆದ ಸ್ಥಳಕ್ಕೆ ಎಸ್ಪಿ ನೇತೃತ್ವದಲ್ಲಿ ಆರ್‍ಎಫ್‍ಎಸ್‍ಎಲ್ ತಂಡ ,ಸೀನ್ ಅಂಡ್ ಕ್ರೈಂ ತಂಡ ಬುಧವಾರ ಭೇಟಿ ನೀಡಿ ಪರಿಶೀಲಿಸಿತು.ಎರಡೂ ತಂಡಗಳು ಅಪಘಾತ ವಿಶ್ಲೇಷಣೆ ನಡೆಸಿ,ಮಾಹಿತಿ ಸಾಕ್ಷ್ಯಗಳನ್ನು ಸಂಗ್ರಹಿಸಿದವು.