ಉದಯಪುರ,ನ.೨೨- ಒರ್ಲ್ಯಾಂಡೊ ಮೂಲದ ಬಿಲಿಯನೇರ್ ಮತ್ತು ಇಂಜೀನಿಯಸ್ ಫಾರ್ಮಾಸ್ಯುಟಿಕಲ್ಸ್‌ನ ಸಿಇಒ ಪದ್ಮಜಾ ಮತ್ತು ರಾಮರಾಜು ಮಂಟೇನಾ ಅವರ ಪುತ್ರಿ ನೇತ್ರಾ ಮಂಟೇನಾ ಮತ್ತು ವಂಶಿ ಗಡಿರಾಜು ಅವರ ರಾಯಲ್ ವೆಡ್ಡಿಂಗ್ ಎಲ್ಲರ ಗಮನ ಸೆಳೆಯುತ್ತಿದೆ. ಹಲವಾರು ಬಾಲಿವುಡ್ ಮತ್ತು ಹಾಲಿವುಡ್ ತಾರೆಯರು ವಿವಾಹದಲ್ಲಿ ಅತಿಥಿಗಳಿಗಾಗಿ ಪ್ರದರ್ಶನ ನೀಡಿದ್ದಾರೆ. ಈಗ, ಜೆನ್ನಿಫರ್ ಲೋಪೆಜ್ ಕೂಡ ಈ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲು ಭಾರತಕ್ಕೆ ಆಗಮಿಸಿದ್ದಾರೆ.
ವಿಮಾನ ನಿಲ್ದಾಣದಿಂದ ಜೆನ್ನಿಫರ್ ಲೋಪೆಜ್ ಅವರ ವೀಡಿಯೊವನ್ನು ಪಾಪರಾಜಿ ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ನೇತ್ರಾ ಮಂಟೇನಾ ಮತ್ತು ವಂಶಿ ಗಡಿರಾಜು ಅವರ ವಿವಾಹಕ್ಕೆ ಹಾಜರಾಗಲು ಉದಯಪುರ ವಿಮಾನ ನಿಲ್ದಾಣದಿಂದ ಹೊರಟಿದ್ದಾರೆ. ಅಮೇರಿಕನ್ ಗಾಯಕಿ ಮತ್ತು ನಟಿ ಪಾಪರಾಜಿ ಮತ್ತು ಆಭಿಮಾನಿಗಳಿಗೆ ಕೈ ಬೀಸಿ ಫೈಯಿಂಗ್ ಕಿಸ್ ನೀಡಿದ್ದಾರೆ. ಪಾಪರಾಜಿಗಳು ಅವರನ್ನು ಭಾರತಕ್ಕೆ ಸ್ವಾಗತಿಸಿದ್ದಾರೆ. ಅವರು ಉದ್ದನೆಯ ಕಂದು ಬಣ್ಣದ ಫರ್ ಕೋಟ್, ಸನ್ ಗ್ಲಾಸ್ ಮತ್ತು ಕಪ್ಪು ಹೀಲ್ಸ್ ಧರಿಸಿದ್ದರು. ಲೋಪೆಜ್ ಕ್ಯಾಮೆರಾಗಳಿಗೆ ಪೋಸ್ ನೀಡದೆ ತನ್ನ ಕಾರನ್ನು ಹತ್ತಿದ್ದಾರೆ.
ಈ ಹಿಂದೆ, ಜೆನ್ನಿಫರ್ ಬ್ರಿಟಿಷ್ ಉದ್ಯಮಿ ಸಂಜಯ್ ಹಿಂದೂಜಾ ಮತ್ತು ಫ್ಯಾಷನ್ ಡಿಸೈನರ್ ನಂದಿತಾ ಮಹ್ವಾನಿಯವರ ಸಹೋದರಿ ಅನು ಮಹ್ವಾನಿ ಅವರ ವಿವಾಹದಲ್ಲಿ ಪ್ರದರ್ಶನ ನೀಡಿದ್ದಾರೆ. ಅವರ ವಿವಾಹವು ಉದಯಪುರದಲ್ಲಿಯೂ ನಡೆದಿದೆ.
ಸರೋವರಗಳ ನಗರಿ ಉದಯಪುರವು ಪ್ರಸ್ತುತ ಅಂತರರಾಷ್ಟ್ರೀಯ ರಾಜಮನೆತನದ ವಿವಾಹಕ್ಕೆ ಸಾಕ್ಷಿಯಾಗುತ್ತಿದೆ. ಅಮೆರಿಕದ ಬಿಲಿಯನೇರ್ ಉದ್ಯಮಿ ರಾಮರಾಜು ಮಂಟೇನಾ ಅವರ ಪುತ್ರಿ ನೇತ್ರ ಮಂಟೇನಾ ಎಲಿಜಬೆತ್ ಮತ್ತು ಅಮೆರಿಕ ಮೂಲದ ವಂಶಿ ಗಡಿರಾಜು ಅವರ ವಿವಾಹ ಸಮಾರಂಭವು ಶುಕ್ರವಾರ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಪ್ರಾರಂಭವಾಗಿದೆ. ಈ ಸಂಭ್ರಮ ನವೆಂಬರ್ ೨೪ ರವರೆಗೆ ಮುಂದುವರಿಯಲಿದ್ದು, ದೇಶಾದ್ಯಂತ ಮತ್ತು ವಿದೇಶಗಳಿಂದ ವಿಶೇಷ ಅತಿಥಿಗಳು ಉದಯಪುರಕ್ಕೆ ಆಗಮಿಸಲಿದ್ದಾರೆ.























