ಹಾಸನದಲ್ಲಿ ಜೆಡಿಎಸ್ ಬೃಹತ್ ಸಮಾವೇಶ

ಬೆಳ್ಳಿ ಹಬ್ಬದ ಸಂಭ್ರಮ

ಹಾಸನ, ಜ. ೨೪- ಜೆಡಿಎಸ್ ಪಕ್ಷದ ಬೆಳ್ಳಿಹಬ್ಬದ ಸಂಭ್ರಮದ ಸಮಾವೇಶ ಹಾಸನದಲ್ಲಿಂದು ನಡೆಯಿತು.


ಜೆಡಿಎಸ್ ಪಕ್ಷಕ್ಕೆ ೨೫ ವರ್ಷ ತುಂಬಿದ ಈ ಸುಸಂದರ್ಭದಲ್ಲಿ ಪಕ್ಷಕ್ಕೆ ನವಚೈತನ್ಯ ತುಂಬಲು ಹಾಸನದ ಹೊರವಲಯದಲ್ಲಿ ಬೃಹತ್ ಸಮಾವೇಶ ನಡೆಸಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ರಣಕಹಳೆಯನ್ನು ಜೆಡಿಎಸ್ ಮೊಳಗಿಸಿದೆ.


ಈ ಬೃಹತ್ ಸಮಾವೇಶದ ಮೂಲಕ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾರ್ಯಕರ್ತರನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಈ ಸಮಾವೇಶವನ್ನು ನಡೆಸಲಾಯಿತು.


ಜೆಡಿಎಸ್ ಭದ್ರಕೋಟೆಯಾಗಿದ್ದ ಹಾಸನದಲ್ಲಿ ಕಾಂಗ್ರೆಸ್ ಹಿಡಿತ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ತನ್ನ ಭದ್ರಕೋಟೆಯನ್ನು ಭದ್ರಗೊಳಿಸಲು ಜೆಡಿಎಸ್ ಹಾಸನದಲ್ಲೆ ಬೃಹತ್ ಸಮಾವೇಶ ನಡೆಸಿತು.


ಈ ಮೂಲಕ ಪಕ್ಷಕ್ಕೆ ನವಚೈತನ್ಯ ತುಂಬುವ ಕೆಲಸವನ್ನು ಮಾಡಲಾಗಿದೆ.
ಇಂದಿನ ಸಮಾವೇಶವು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್‌ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್‌ಬಾಬು, ಶಾಸಕರುಗಳಾದ ಎ. ಮಂಜು, ಬೋಜೇಗೌಡ, ಹರೀಶ್ ಗೌಡ ಸೇರಿದಂತೆ ಜೆಡಿಎಸ್‌ನ ಎಲ್ಲಾ ಶಾಸಕರು, ಪ್ರಮುಖ ಮುಖಂಡರುಗಳು ಭಾಗಿಯಾಗಿದ್ದರು.


ಈ ಸಮಾವೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಭಾಗಿಯಾಗಿದ್ದು ಗಮನ ಸೆಳೆಯಿತು.
ಈ ಸಮಾವೇಶಕ್ಕೆ ಆಗಮಿಸಿದ ಎಲ್ಲ ಕಾರ್ಯಕರ್ತರಿಗೂ ಕುಡಿಯುವ ನೀರು, ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.


ಹಾಸನದ ಹೊರವಲಯದ ಹೂಡಾ ಬಡಾವಣೆಯಲ್ಲಿ ಈ ಕಾರ್ಯಕ್ರಮಕ್ಕಾಗಿಯೇ ಬೃಹತ್ ವೇದಿಕೆಯನ್ನು ಸಿದ್ದಪಡಿಸಲಾಗಿತ್ತು. ೧ ಲಕ್ಷಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಎಲ್ಲಾ ಆಸನಗಳು ಸಂಪೂರ್ಣ ಭರ್ತಿಯಾಗಿದ್ದು, ಹಾಸನ ಜಿಲ್ಲೆಯಿಂದ ವಿವಿಧೆಡೆಯಿಂದ ನೂರಾರು ಬಸ್‌ಗಳಲ್ಲಿ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಯಾಗಿದ್ದರು.


ಇಡೀ ಹಾಸನ ಜೆಡಿಎಸ್‌ಮಯವಾಗಿದ್ದು, ಹಾಸನದಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಸ್ಥಳೀಯ ಶಾಸಕ ಸ್ವರೂಪ್ ಪ್ರಕಾಶ್ ಸೇರಿದಂತೆ ಅನೇಕ ನಾಯಕರುಗಳ ಕಟೌಟ್‌ಗಳು, ಬ್ಯಾನರ್‌ಗಳು ಹಾಗೂ ಪ್ಲೆಕ್ಸ್‌ಗಳು ರಾರಾಜಿಸುತ್ತಿವೆ.


ಹುಟ್ಟೂರಿಗೆ ಭೇಟಿ: ವಿಶೇಷ ಪೂಜೆ


ಈ ಸಮಾವೇಶದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಹೆಲಿಕ್ಯಾಪ್ಟರ್‌ನಲ್ಲಿ ಆಗಮಿಸಿದ ಮಾಜಿ ಪ್ರಧಾನಿ ದೇವೇಗೌಡರು ಮೊದಲು ತಮ್ಮ ಹುಟ್ಟೂರು ಹರದನಹಳ್ಳಿಗೆ ತೆರಳಿ ಅಲ್ಲಿ ತಮ್ಮ ಮನೆ ದೇವರು ದೇವೇಶ್ವರನಿಗೆ ಪೂಜೆ ಸಲ್ಲಿಸಿ ಬಳಿಕ ಸಮಾವೇಶದಲ್ಲಿ ಭಾಗಿಯಾದರು.