
ಬೆಂಗಳೂರು, ಜು.೨- ರಾಜ್ಯದ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಹಾಗೂ ಆಡಳಿತ ವೈಫಲ್ಯ ಖಂಡಿಸಿ ಜೆಡಿಎಸ್ ಬೆಂಗಳೂರು ಮಹಾನಗರ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದಲ್ಲಿಂದು ಫ್ರೀಡಂ ಪಾರ್ಕಿನ ಮೈದಾನದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರಿ ಹಿಡಿದ ಕಾಂಗ್ರೆಸ್ ಸರ್ಕಾರ, ಇದೀಗ ಆ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡುವಲ್ಲಿಯೂ ವಿಫಲವಾಗಿದೆ. ಜನರಿಗೆ ಕನಿಷ್ಠ ಮೂಲ ಸೌಕರ್ಯ ಒದಗಿಸುತ್ತಿಲ್ಲ.
ಗುತ್ತಿಗೆದಾರರ ಬಾಕಿ ಹಣ ಪಾವತಿ ಮಾಡುವುದಕ್ಕೂ ವಿಳಂಬ ಮಾಡುತ್ತಿದೆ. ಪರಿಶಿಷ್ಟರಿಗೆ ಮೀಸಲಾಗಿರುವ ಹಣವನ್ನು ಬಿಡುಗಡೆ ಮಾಡುವಲ್ಲಿ ತಾರತಮ್ಯ ಎಸಗುತ್ತಿದ್ದು, ಕೇವಲ ತುಷ್ಟೀಕರಣ ರಾಜಕಾರಣದಲ್ಲಿಯೇ ಕಾಲಹರಣ ಮಾಡುತ್ತಿದೆ ಎಂದು ಜೆಡಿಎಸ್ ನಾಯಕರು ಆರೋಪಿಸಿದರು.
ಬಡವರಿಗೆ ಮನೆ ವಿತರಣೆ ಮಾಡುವಲ್ಲಿಯೂ ಸರ್ಕಾರ ಲೋಪ ಎಸಗಿದ್ದು, ಒಂದು ಮನೆಗೆ ೧೦ಸಾವಿರ ವಸೂಲಿ ಮಾಡುತ್ತಿದ್ದಾರೆ. ರಾಜಕೀಯದಲ್ಲಿ ಯಾರೂ ಶಾಶ್ವತ ಅಲ್ಲ. ನಮ್ಮ ಅವಧಿಯಲ್ಲಿ ಮಾಡುವ ಒಳ್ಳೆಯ ಕೆಲಸಗಳು ಶಾಶ್ವತವಾಗಿ ಉಳಿಯುತ್ತದೆ.
ಒಟ್ಟಾರೆ, ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿನ ಭ್ರಷ್ಟಾಚಾರ, ಲಂಚಗುಳಿತನ, ಸರ್ಕಾರದ ಆಡಳಿತದ ವೈಫಲ್ಯದ ಬಗ್ಗೆ ಹಾಗೂ ಸರ್ಕಾರ ದಿವಾಳಿಯಾಗಿದೆ ಎಂದು ಬೇಸರಗೊಂಡು ಸ್ವಪಕ್ಷದ ಹಿರಿಯ ಶಾಸಕರುಗಳೇ ಟೀಕಾ ಪ್ರಹಾರ ಮಾಡುತ್ತಿದ್ದು, ಇದೇ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನಾವು ಮುಂದುವರೆಸುತ್ತೇವೆ ಎಂದು ಜೆಡಿಎಸ್ ನಾಯಕರು ಹೇಳಿದರು.