
ಅಥಣಿ : ಫೆ.15:ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವೊಂದು 25 ವರ್ಷ ಪೂರೈಸಿರುವ ಏಕೈಕ ಪಕ್ಷವೆಂದರೆ ಜೆಡಿಎಸ್ ಪಕ್ಷ. ಈ ಪಕ್ಷ ಇಂದು ರಾಜ್ಯದ ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ದೇವೇಗೌಡರು ಪಕ್ಷ ಕಟ್ಟಿ ಪ್ರಧಾನಿಯಾಗಿ, ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ಮಂತ್ರಿಗಳಾಗಿದ್ದಾರೆ ಎಂದು ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಶಹಜಹಾನ ಡೊಂಗರಗಾಂವ ಹೇಳಿದರು.
ಅವರು ಪಟ್ಟಣದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಪಕ್ಷ ಸ್ಥಾಪನೆಯಾದ ದಿನದಿಂದಲೇ ರೈತರು, ಬಡವರು ಮತ್ತು ಸಾಮಾನ್ಯ ಜನರ ಪರವಾಗಿ ಕೆಲಸ ಮಾಡುತ್ತಾ ಬಂದಿದೆ. ರಾಜ್ಯದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪಕ್ಷವಾಗಿ ಜೆಡಿಎಸ್ ಬೆಳೆದಿದೆ. ದೇಶದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ರಜತ ಮಹೋತ್ಸವದ ಅಂಗವಾಗಿ ಹಾಸನದಲ್ಲಿ ಬೃಹತ್ ಸಮಾವೇಶ ಯಶಸ್ವಿಗೊಳಿಸಲಾಗಿದೆ. ಇದೇ ಮಾದರಿಯಲ್ಲಿ ರಾಜ್ಯದ ಐದು ವಲಯಗಳಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಕಿತ್ತೂರು ಕರ್ನಾಟಕ ವಿಭಾಗದ ಏಳು ಜಿಲ್ಲೆಗಳ ಬೃಹತ್ ಸಮಾವೇಶ ವಿಜಯಪುರ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಜೆಡಿಎಸ್ ಪಕ್ಷದ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ಜಿಲ್ಲೆಯ ಎಲ್ಲಾ 18 ಮತಕ್ಷೇತ್ರಗಳಿಂದಲೂ ಸಾವಿರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಭಾಗವಹಿಸುವ ನಿಟ್ಟಿನಲ್ಲಿ ಸಭೆಗಳನ್ನು ನಡೆಸಲಾಗುತ್ತಿದೆ. ಬೆಳಗಾವಿ ಜಿಲ್ಲೆಯಿಂದ ಸು. 20 ಸಾವಿರಕ್ಕೂ ಹೆಚ್ಚು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದರು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ ಭ್ರಷ್ಟ ಸರ್ಕಾರವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ. ಭ್ರಷ್ಟಾಚಾರದಲ್ಲಿ ತೊಡಗಿದೆ. ಅನೇಕ ತಿಂಗಳುಗಳಿಂದ ಅನೇಕ ಕಾಮಗಾರಿಗಳನ್ನು ಕೈಗೊಂಡಿರುವ ಗುತ್ತಿಗೆದಾರರ ಬಿಲ್ಲು ನೀಡಿದೆ ಸತಾಯಿಸುತ್ತಿದ್ದಾರೆ. ಇದರಿಂದ ಅನೇಕ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಸರ್ಕಾರದ ವೈಫಲ್ಯಗಳನ್ನು ರಾಜ್ಯದ ಜನರಿಗೆ ತಿಳಿಸುವುದರ ಜೊತೆಗೆ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಕೈಗೊಂಡ ಜನಪದ ಹಾಗೂ ರೈತರ ಪರವಾದ ಮಹತ್ವದ ಯೋಜನೆಗಳ ಬಗ್ಗೆ ಮತ್ತು ಬಿಜೆಪಿ ಮೈತ್ರಿ ಪಕ್ಷದೊಂದಿಗೆ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸುವ ಕಾರ್ಯ ಮಾಡುತ್ತಿದ್ದೇವೆ. ಜೆಡಿಎಸ್ ಪಕ್ಷವನ್ನು ಸಂಘಟಿಸಿ ಮತ್ತೆ 2028 ಕ್ಕೆ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ತರಲಿದ್ದೇವೆ. ಈ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಅಥಣಿ ಮತಕ್ಷೇತ್ರದಿಂದ ಹೆಚ್ಚಿನ ಜನರು ವಿಜಯಪುರ ಸಮಾವೇಶದಲ್ಲಿ ಭಾಗವಹಿಸಬೇಕೆಂದು ಶಂಕರ ಮಾಡಲಗಿ ಕರೆ ನೀಡಿದರು.
ಈ ವೇಳೆ ನೂತನ ಅಥಣಿ ತಾಲೂಕ ಅಧ್ಯಕ್ಷರಾಗಿ ಆಯ್ಕೆಯಾದ ದುಂಡಪ್ಪ ನಿಂಗನೂರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ, ಚಿಕ್ಕೋಡಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಲ್ಲಪ್ಪ ಮಗೆಣ್ಣವರ, ಮುಖಂಡರಾದ ರಾಜು ಡವರಿ, ಮುರಿಗೆಪ್ಪ ತಕತರಾವ, ಮಲ್ಲು ಕನಶೆಟ್ಟಿ, ಜಕ್ಕಪ್ಪ ಧರಿಗೌಡರ, ಎಂ ಸಿ ಗಂಗಾಧರ. ಲಕ್ಕಪ್ಪ ಮುಡಿಸಿ, ಗೋಪಾಲ ಮಂಗಸೂಳಿ, ಶಿವಲಿಂಗ ಢವಳೇಶ್ವರ, ಕಲ್ಲಪ್ಪ ಕೊರಬು, ಶಬ್ಬೀರಗೌಡ ಪಾಟೀಲ, ಇಮ್ತಿಯಾಜ್ ಹಿಪ್ಪರಗಿ. ಬಾಬುಲಾಲ್ ಸುತಗುಂಡಿ. ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

























