
ಕನಕಪುರ, ಸೆ. ೨೭: ರಾಜ್ಯ ಸರ್ಕಾರದ ವೈಫಲ್ಯವನ್ನು ಖಂಡಿಸಿ ಜೆಡಿಎಸ್ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಪಾದಯಾತ್ರೆಗೆ ನಾಳೆ ಕನಕಪುರದಿಂದ ಚಾಲನೆ ನೀಡಲಾಗುವುದು ಎಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷ ಜಯಮುತ್ತು ತಿಳಿಸಿದ್ದಾರೆ.
ಕನಕಪುರದಲ್ಲಿ ಮಾತನಾಡಿದ ಅವರು,ಜನರ ಸಮಸ್ಯೆಗೆ ಸ್ವಂದಿಸಬೇಕಾದ ಸರ್ಕಾರ ಆಶ್ವಾಸನೆಗಳನ್ನು ಕೊಡಿಸುತ್ತಿದ್ದ ಕ್ರಮವನ್ನು ಜನಸಾಮಾನ್ಯರಿಗೆ ತಿಳಿಸುವ ಉದ್ದೇಶದಿಂದ ಸೆಪ್ಟಂಬರ್ ೨೮ ರಂದು ಬೆಂಗಳೂರು-ಕನಕಪುರ ರಸ್ತೆಯ ರೈಸ್ಮಿಲ್ ಮಾರ್ಗದಿಂದ ಪಾದಯಾತ್ರೆ ಆರಂಭವಾಗಿ ಚನ್ನಬಸಪ್ಪ ಸರ್ಕಲ್ವರೆಗೆ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು.
ತಾಲೂಕು ಅಧ್ಯಕ್ಷ ಬಿ. ನಾಗರಾಜು ಮಾತನಾಡಿ,ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮತ್ತು ಹೆಚ್.ಡಿ. ಕುಮಾರಸ್ವಾಮಿಯವರ ಮಾರ್ಗದರ್ಶನದಲ್ಲಿ ನಿಖಿಲ್ ಕುಮಾರಸ್ವಾಮಿಯವರ ನೇತೃತ್ವದಲ್ಲಿ ನಾಳೆ ನಡೆಯುತ್ತಿರುವ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ.
ರೈತರಿಗೆ ನೀರು, ವಿದ್ಯುತ್, ಬಿತ್ತನೆ ಬೀಜಗಳನ್ನು ಕೊಡಿ. ಬರಪರಿಹಾರವಾಗಿ ೨,೫೦೦ ನೀಡಿರುವುದು ಒಂದು ಮೂಗುದಾರಕೋಡ ಬರಲ್ಲ ಎಂದು ಹೇಳಿದರು.
ರಾಜ್ಯ ಯುವ ಜೆಡಿಎಸ್ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರ ನೇತೃತ್ವದಲ್ಲಿ ನಡೆಯುವ ಪಾದಯಾತ್ರೆ ಯಲ್ಲಿ ಜಿಲ್ಲೆಯಿಂದ ಸಹಸ್ರಾರು ಕಾರ್ಯಕರ್ತರು, ಮುಖಂಡರು ಪಾಲ್ಗೊಳ್ಳುವಂತೆ ಜಿಲ್ಲಾ ದಿಶಾ ಕಮಿಟಿ ಸದಸ್ಯ ಗೇರಹಳ್ಳಿ ರಾಜೇಶ್ ಕರೆ ನೀಡಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ವಕೀಲ ನಂಜೇಗೌಡ ಮಾತನಾಡಿ, ರಾಜ್ಯದಲ್ಲಿ ಸಕಾಲದಲ್ಲಿ ಮಳೆ ಬಾರದೆ ಬರದ ನೆರಳಿನಲ್ಲಿ ಇರುವ ಜನ ಜಾನುವಾರುಗಳು ಕುಡಿಯುವ ನೀರು, ಮೇವಿನ ಕೊರತೆಯಿಂದ ಹೈರಾಣಾಗಿದ್ದಾರೆ.ಹಾಗಾಗಿ ತಮ್ಮ ಸ್ವಂತ ಕ್ಷೇತ್ರವನ್ನೇ ಮೂರನೇ ಪಟ್ಟಿಯಲ್ಲಿ ಬರದ ಘೋಷಣೆ ಮಾಡಿದ್ದಾರೆ. ಇವರಿಗೆ ಜನರ ಸಂಕಷ್ಟ ಅರ್ಥವಾಗುತ್ತಿಲ್ಲ ಎಂದು ಆರೋಪಿಸಿದರು.
ತಾಲೂಕು ಜೆಡಿಎಸ್ ಮಾಜಿ ಅಧ್ಯಕ್ಷ ಸಿದ್ದಮರೀಗೌಡ, ರಾಜ್ಯ ಯುವ ಘಟಕದ ಉಪಾಧ್ಯಕ್ಷ ಚಿನ್ನಸ್ವಾಮಿ ಮಾತನಾಡಿ,ಸರ್ಕಾರದ ವಿರುದ್ಧ ಚಾಟಿ ಬೀಸಲು ನಾಳೆ ಪ್ರತಿಭಟನೆ ಎಲ್ಲರೂ ಒಗ್ಗಟ್ಟಿನಿಂದ ಮಾಡುವುದರ ಜೊತೆ ತಾಲೂಕಿನ ಸಮಸ್ಯೆಗಳನ್ನು ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗುವುದು ಎಂದರು.
ಕುರುಪೇಟೆ ಲೊಕೇಶ್ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದರು. ನಗರಸಭಾ ಮಾಜಿ ಸದಸ್ಯರಾದ ಸ್ಟುಡಿಯೋ ಚಂದ್ರು, ಪುಟ್ಟರಾಜು, ಅರಳಾಳು ರಾಜೇಂದ್ರ, ಜವನಾಮನ ದೊಡ್ಡಿ ತಿಮ್ಮೇಗೌಡ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.

























