
ರಾಮನಗರ,ಮೇ.೨೪: ಸಮಾಜಮುಖಿ ಕಾರ್ಯಗಳಲ್ಲಿ ಸದಾ ಸಕ್ರಿಯವಾಗಿ ತೊಡಗಿಸಿಕೊಂಡಿರುವ ವಕೀಲರು ಹಾಗೂ ಜೆಡಿಎಸ್ ಪದವೀಧರರ ಘಟಕದ ರಾಜ್ಯಾಧ್ಯಕ್ಷ ರಾಜಶೇಖರ್ ಅವರು ತಮ್ಮ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿರುವುದು ಸಂತಸ ತಂದಿದೆ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ ತಿಳಿಸಿದರು.
ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಶನಿವಾರ ರಾಜಶೇಖರ್ ಅವರು ತಮ್ಮ ಜನ್ಮದಿನದ ಅಂಗವಾಗಿ ಪತ್ರಿಕಾ ವಿತಕರಿಗೆ ಆಹಾರ ಸಾಮಗ್ರಿ ಮತ್ತು ರೈನ್ ಕೋಟ್ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವೇಳೆ ಮಾತನಾಡಿದ ಸಬ್ಬಕೆರೆ ಶಿವಲಿಂಗಪ್ಪ ಪತ್ರಿಕಾ ವಿತರಕರು ಪತ್ರಿಕೆಗಳನ್ನು ಓದುಗರಿಗೆ ತಲುಪಿಸುವ ಮೂಲಕ ಜ್ಞಾನ ಪ್ರಸರಣ ಮಾಡುತ್ತಿದ್ದಾರೆ. ಅವರಿಗೆ ಸಹಾಯ ಹಸ್ತ ನೀಡಬೇಕಾದ ಅಗತ್ಯವಿದೆ ಎಂದರು.
ರಾಜಶೇಖರ್ ಅವರು ಸದಾ ಸಮಾಜಮುಖಿ ಚಿಂತನೆ ಮಾಡುವ ವ್ಯಕ್ತಿ. ಆಡಂಬರದ ಜನ್ಮದಿನಕ್ಕೆ ಒತ್ತು ನೀಡದೆ ಮಳೆ, ಗಾಳಿ ಹಾಗೂ ಬಿಸಿಲಿನ ಮಧ್ಯೆಯೂ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ವಿತರಕರಿಗೆ ನೆರವಿಗೆ ಮುಂದಾಗಿದ್ದಾರೆ. ವಿತರಕರ ಶ್ರಮಕ್ಕೆ ಗೌರವ ಸಲ್ಲಿಸಿರುವ ಮೂಲಕ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಜೆಡಿಎಸ್ ಪದವೀಧರರ ಘಟಕದ ರಾಜ್ಯಾಧ್ಯಕ್ಷ ರಾಜಶೇಖರ್ ಮಾತನಾಡಿ ಪತ್ರಿಕಾ ವಿತರಕರಂತಹ ಶ್ರಮಜೀವಿಗಳಿಗೆ ನೆರವಾಗುವ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ ಎಂದು ತಿಳಿಸಿದರು.
ಜೆಡಿಎಸ್ ವಕ್ತಾರ ನರಸಿಂಹಮೂರ್ತಿ ಮಾತನಾಡಿ ಪ್ರತಿದಿನ ಬೆಳಗ್ಗಿನ ಜಾವ ಎದ್ದು ಮನೆ ಮನೆಗೆ ಪತ್ರಿಕೆ ತಲುಪಿಸುವ ಪತ್ರಿಕಾ ವಿತರಕರ ಶ್ರಮವನ್ನು ಗೌರವಿಸುವ ಉದ್ದೇಶದಿಂದ ಅವರಿಗೆ ರೈನ್‌ಕೋಟ್, ಅಗತ್ಯ ವಸ್ತುಗಳನ್ನು ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ೨೫ಕ್ಕೂ ಹೆಚ್ಚು ಪತ್ರಿಕಾ ವಿತರಕರಿಗೆ ಆಹಾರ ಸಾಮಗ್ರಿ ಕಿಟ್ ಮತ್ತು ರೈನ್‌ಕೋಟ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಯುವ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎಸ್.ಜಯಕುಮಾರ್ ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಮುಖಂಡರಾದ ಗೌಡಯ್ಯನದೊಡ್ಡಿ ಕೃಷ್ಣ, ಮಾವಿನ ಸಸಿ ವೆಂಕಟೇಶ್, ಬಾಲಗೇರಿ ರವಿ, ಕೆಂಪರಾಜು, ಆಡಿಟರ್ ಕುಮಾರ್, ಯೋಗೇಶ್, ಶೋಭ, ಸರಸ್ವತಿ, ಜಯಚಿತ್ರ, ಜಯರಾಮ್, ಸತ್ಯವತಿ, ಪೂರ್ಣಿಮಾ, ಅಂಜನಾಪುರ ವಾಸು, ರಮೇಶ್, ನವೀನ್, ನರೇಂದ್ರ, ಸುರೇಶ್ ಸೇರಿದಂತೆ ಮುಖಂಡರು ಕಾರ್ಯಕರ್ತರು ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಿ ರಾಜಶೇಖರ್ ಅವರಿಗೆ ಹಾರ-ತುರಾಯಿ ಶಾಲು-ಶಲ್ಯಗಳನ್ನು ಹೊದಿಸಿ ಶುಭ ಹಾರೈಸಿದರು.





























