
ಕಲಬುರಗಿ : ಮೇ.3:ವಿಶ್ವವಿದ್ಯಾಲಯ ಶೈಕ್ಷಣಿಕ ಸಾಧನೆ ಮತ್ತು ಭೌತಿಕ ಬೆಳವಣಿಗೆಗೆ ಇಂಜಿನಿಯರಿಂಗ್ ವಿಭಾಗ ಆಧಾರ. ಸ್ಥಳೀಯ ಇಂಜಿನಿಯರ್ ಜಯಪ್ರಕಾಶ್ ಕರ್ಜಗಿ ಮೃದು ಸ್ವಭಾವ ಮತ್ತು ಸದಾ ನಗುಮುಖದ ವ್ಯಕ್ತಿ. ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ವಿಶ್ವಾಸ ಉತ್ತಮ ಬಾಂಧವ್ಯ ಬೆಸೆದಿದ್ದರು. ಸುದೀರ್ಘ ಸೇವೆ ನಂತರ ನಿವೃತ್ತರಾಗುತ್ತಿದ್ದಾರೆ. ಅವರ ಪ್ರಾಮಾಣಿಕತೆ ಮತ್ತು ಕಾರ್ಯ ನೈಪುಣ್ಯತೆಯನ್ನು ಎಲ್ಲರೂ ಮೆಚ್ಚಿಕೊಳ್ಳಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಶಶಿಕಾಂತ್ ಎಸ್. ಉಡಿಕೇರಿ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕೈಲಾಸಭವನ ಅತಿಥಿಗೃಹದ ಸಭಾಂಗಣದಲ್ಲಿ ಇಂಜಿನಿಯರಿಂಗ್ ವಿಭಾಗದ ಸ್ಥಳೀಯ ಅಭಿಯಂತರ ಜಯಪ್ರಕಾಶ್ ಕರ್ಜಗಿ ಅವರು ನಿವೃತ್ತಿ ನಿಮಿತ್ತ ಸಿಬ್ಬಂದಿಗಳು, ಗುತ್ತಿಗೆದಾರರು ಮತ್ತು ಹಿತೈಷಿಗಳು ಆಯೋಜಿಸಿದ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಎಂ.ಟೆಕ್ ಪದವಿ ಪೂರೈಸಿ ಸ್ಥಳೀಯ ಇಂಜಿನಿಯರ್ ಹುದ್ದೆಯ ಪರಿಪೂರ್ಣ ಜ್ಞಾನ, ವೃತ್ತಿ ನೈಪುಣ್ಯತೆ, ನಿರ್ವಹಣೆ ಮತ್ತು ಕಾರ್ಯಪರತೆ ಬಗ್ಗೆ ಕಾಳಜಿಯಿತ್ತು. ವಿಶ್ವವಿದ್ಯಾಲಯದ ಅಗತ್ಯ ಕಟ್ಟಡ, ರಸ್ತೆ, ವಿದ್ಯುತ್, ಅಗತ್ಯ ಸೌಲಭ್ಯಗಳ ವಿತರಣೆ ಮತ್ತಯ ನಿರ್ವಹಣೆ ಮಾಡುತ್ತಿದ್ದರು ಎಂದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ರಮೇಶ್ ಲಂಡನಕರ್ ಮಾತನಾಡಿ ಇಂಜಿನಿಯರ್ ವಿಭಾಗದ ವಿವಿಧ ಶಾಖೆಗಳ ಸಿಬ್ಬಂದಿಗಳಿಗೆ ಒಗ್ಗಟ್ಟು ಮತ್ತು ಸಹನೆ ಬಹಳ ಮುಖ್ಯ. ವಿಭಾಗಗಳ ಕೊರತೆಯನ್ನು ಕಾಳಜಿಯಿಂದ ಮಾಡಬೇಕು. ಒತ್ತಡಗಳ ಮಧ್ಯೆ ಜಯಪ್ರಕಾಶ್ ಕರ್ಜಗಿ ಅವರು ವಾದವಿಲ್ಲದೆ ನೈಜವಾಗಿ ಪ್ರತಿಕ್ರಿಯೆ ನೀಡಿ ಕೆಲಸ ಪೂರೈಸುತ್ತಿದ್ದರು. ಅಧಿಕಾರಿಗಳಿಗೆ ಘಾಷಿ ಮಾಡದೆ ಕಾನೂನು ಪರಿಧಿಯಲ್ಲಿ ಸೇವೆ ಪೂರೈಸಿದ್ದಾರೆ. ಅವರ ಕೆಲಸ ಮತ್ತು ವ್ಯಕ್ತಿತ್ವವನ್ನು ಸಿಬ್ಬಂದಿಗಳು ಪಾಲಿಸಬೇಕು. ಕರ್ಜಗಿ ಅವರ ನಿವೃತ್ತ ಜೀವನ ಸಂತೋಷದಿಂದರಲಿ. ವಿಶ್ವವಿದ್ಯಾಲಯದ ಜೊತೆಗೆ ಅವರ ಸಂಪರ್ಕ ಮತ್ತು ಸಹಕಾರವಿರಲಿ ಎಂದರು.
ಮೌಲ್ಯಮಾಪನ ಕುಲಸಚಿವ ಡಾ. ಎನ್ ಜಿ. ಕಣ್ಣೂರು ಮಾತನಾಡಿ ವಿಶ್ವವಿದ್ಯಾಲಯದ ಬೆನ್ನೆಲುಬಾಗಿ ಇಂಜಿನಿಯರ್ ವಿಭಾಗ ಕೆಲಸ ಮಾಡುತ್ತದೆ. ನಿವೃತ್ತರಾಗುತ್ತಿರುವ ಸ್ಥಳೀಯ ಅಭಿಯಂತರ ಜಯಪ್ರಕಾಶ ಕರ್ಜಗಿ ಅವರ ಕೆಲಸದಲ್ಲಿ ದೂರದೃಷ್ಟಿ ಮತ್ತು ಜಾಣ್ಮೆಯಿತ್ತು. ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪೂರಕವಾಗಿ ಬಗೆಹರಿಸುತ್ತಿದ್ದರು. ಅವರ ವೃತ್ತಿ ಸೇರಿಕೆ ಮತ್ತು ನಿವೃತ್ತಿ ನಡುವಿನ ಸೇವೆ ಎಂದಿಗೂ ನೆನಪಿನಲ್ಲಿಳುತ್ತವೆ. ಅವರ ಮುಂದಿನ ಜೀವನದಲ್ಲಿ ನೆಮ್ಮದಿಯಿಂದಿರಲಿ ಎಂದರು.
ಸ್ಥಳೀಯ ಅಭಿಯಂತರ ಜಯಪ್ರಕಾಶ್ ಕರ್ಜಗಿ ಮಾತನಾಡಿದರು. ನಿವೃತ್ತ ಎಇಇ ವೆಂಕಟೇಶ್ ಮುದಗಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಇಇಗಳಾದ ಅಶೋಕ ಜಿಗಳಮಡಿ ಮತ್ತು ರಾಜಪ್ಪ ಜಿ ಅನಿಸಿಕೆ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಇಂಜಿನಿಯರ್ ವಿಭಾಗದ ಸಿಬ್ಬಂದಿಗಳು, ಗುತ್ತಿಗೆದಾರರು, ಹಿತೈಷಿಗಳು ಮತ್ತು ಕುಟುಂಭವರ್ಗದವರಿದ್ದರು. ರಿಷಿಕುಮಾರ್ ಅತಿಥಿ ಗಣ್ಯರನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸೂರ್ಯಕಾಂತ್ ಅಮರೆ ಪರಿಚಯಿಸಿದರು. ಶರಣುನಾವಿ ಗಾಣಗಾಪುರ ವಂದಿಸಿದರು.
ಜಯಪ್ರಕಾಶ್ ಕರ್ಜಗಿ ಅವರು ವಿಶ್ವವಿದ್ಯಾಲಯದ ಆಯೋಜನೆಯ ಘಟಿಕೋತ್ಸವ, ಯುವಜನೋತ್ಸವ, ಕ್ರೀಡೋತ್ಸವ, ವಿಚಾರ ಸಂಕಿರಣ, ಸಮ್ಮೇಳನಗಳು ಯಶಸ್ವಿಗೊಳ್ಳಲು ಶ್ರಮಿಸಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣದಲ್ಲಿ ಅವರ ಜಾಣತನ, ಕಾಳಜಿ ಮತ್ತು ಕ್ರಿಯಾಶೀಲತೆ ಕಾಣುತ್ತದೆ. ವಿಶ್ವವಿದ್ಯಾಲಯಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಭವನ ಮುಕುಟದಂತಿದೆ. ಕಟ್ಟಡ, ಮುಖ್ಯ ಸಭಾಂಗಣ, ಆಸನ ವ್ಯವಸ್ಥೆ ಚನ್ನಾಗಿದೆ. ಸ್ವಚ್ಛತೆ ಅಲ್ಲಿನ ಸೌಲಭ್ಯಗಳನ್ನು ಆಧುನೀಕರಿಸಿ ಮತ್ತಷ್ಟು ಹೈಟೆಕ್ ಮಾಡಬೇಕು. ಕಾನ್ಫರೆನ್ಸ್ ಕಾಂಪ್ಲೆಕ್ಸ ರೀತಿ ಸುಸಜ್ಜಿತಗೊಳಿಸಬೇಕು.
- ಪ್ರೊ. ಶಶಿಕಾಂತ್ ಎಸ್. ಉಡಿಕೇರಿ
ಕುಲಪತಿಗಳು






















