ಬೀದರ್‍ನಲ್ಲಿ ಆರೋಗ್ಯ ಹಕ್ಕಿನ ಕಾಯ್ದೆ ಜಾರಿಗಾಗಿ ಜಾಥಾ: ಭೀಮಾ

ಬೀದರ್:ಫೆ.3: ನಾಳೆ ಬುಧವಾರ ನಗರದ ಅಂಬೇಡ್ಕರ್ ವೃತ್ತದಿಂದ ಜನವಾಡ ರಸ್ತೆಯಲ್ಲಿರುವ ಸಹಾಯಕ ಆಯುಕ್ತರ ಕಚೇರಿ ವರೆಗೆ ರಾಜ್ಯದಲ್ಲಿ ಆರೋಗ್ಯ ಹಕ್ಕಿನ ಕಾಯ್ದೆ ಜಾರಿಗೆ ಆಗ್ರಹಿಸಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿಯ ಮುಖ್ಯಸ್ಥ ಭೀಮಾ ತಿಳಿಸಿದರು.
ಸೋಮವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಫೆ.2ರಿಂದ ಈ ತಿಂಗಳ 17ರ ವರೆಗೆ ರಾಜ್ಯಾದ್ಯಂತ ಜಾಥಾ ಹಮ್ಮಿಕೊಳ್ಳಲಾಗಿದ್ದು, ಬೀದರ್‍ನಲ್ಲಿ ಫೆ.4ರಂದು ಹಮ್ಮಿಕೊಳ್ಳಲಾಗಿದೆ ಎಂದರು.
ಲಿಂಗತ್ವ ಬದಲಾವಣೆಗಾಗಿ ಸುಮಾರು 5ರಿಂದ 6 ಲಕ್ಷ ವರೆಗೆ ಖರ್ಚು ಬರಲಿದ್ದು, ಸರ್ಕಾರವೇ ಈ ವೆಚ್ಚ ಭರಿಸಿ ನಮಗೆ ನ್ಯಾಯ ಒದಗಿಸಬೇಕು. ನಮ್ಮ ಈ ಜಾಥಾಗೆ ಹಲವಾರು ಸಂಘಟನೆಗಳು ಕೈ ಜೋಡಿಸಿದ್ದಕ್ಕೆ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಭೀಮಾ ಹೇಳಿದರು.
ಪ್ರಗತಿಪರ ಚಿಂತಕ ಮಹೇಶ ಗೋರನಾಳಕರ್ ಮಾತನಾಡಿ, ವ್ಯಕ್ತಿಯ ಘನತೆ ಹಾಗೂ ಗೌರವ ಎತ್ತಿ ಹಿಡಿಯುವ ಕೆಲಸ ಸಂವಿಧಾನ ಮಾಡುತ್ತಿದೆ. ಅದರ ಆಶಯದಂತೆ ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸಿ ಅವರ ಬೇಕು, ಬೇಡಿಕೆಗಳನ್ನು ಸರ್ಕಾರ ಪ್ರಾಮಾಣಿಕ ರೀತಿಯಲ್ಲಿ ಪುರೈಸಬೇಕೆಂದು ಕರೆ ನೀಡಿದರು.
ಓಂಪ್ರಕಾಶ ರೊಟ್ಟೆ ಈ ಸಂದರ್ಭದಲ್ಲಿ ಮಾತನಾಡಿ, ಎಲ್ಲ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಔಷಧ ಪುರೈಕೆಯಾಗಬೇಕು. ಹೊರಗಡೆ ಚೀಟಿ ಬರೆದು ಕೊಡದೇ ಸರ್ಕರವೇ ಅದನ್ನು ಪುರೈಕೆ ಮಾಡಬೇಕು. ಸಾರ್ವತ್ರಿಕವಾಗಿರುವ ಈ ಜಾಥಾವನ್ನು ಎಲ್ಲರು ಸೇರಿ ಯಶಸ್ವಿಗೊಳಿಸಬೇಕೆಂದು ಕರೆ ಕೊಟ್ಟರು.
ಜಗದೀಶ್ವರ ಬಿರಾದಾರ ಮಾತನಾಡಿ, ಪ್ರತಿ ಸಲವೂ ಚಿಕಿತ್ಸೆಯ ಖರ್ಚಿನಲ್ಲಿ 60% ರಿಂದ 70% ಖರ್ಚು ಔಷಧಗಳ ಮೇಲೆ ಇರುತ್ತದೆ. ಈ ಕಾರಣಕ್ಕಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧ ಸಿಗಬೇಕು, ಎಲ್ಲಾ ಸರ್ಕಾರಿ ವ್ಯವಸ್ಥೆಗಳಲ್ಲಿ ಪ್ರತಿಯೊಬ್ಬರಿಗೂ ಔಷಧಗಳು ಉಚಿತವಾಗಿ ಲಭ್ಯವಾಗುತ್ತಿರಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ಸಿಗುವ ಔಷಧಗಳ ಗುಣಮಟ್ಟ ಉತ್ತಮವಾಗಿ ಇರಬೇಕು ಎನ್ನುವ ಜವಾಬ್ದಾರಿಯನ್ನೂ ಸರ್ಕಾರ ವಹಿಸಬೇಕು. ತಮಿಳು-ನಾಡು”, ಕೇರಳ, ಹಾಗು ರಾಜಸ್ಥಾನಗಳು ಈಗಾಗಲೇ ಜನರಿಗೆ ಉಚಿತ ಔಷಧಗಳು ಸಿಗುವಂತೆ ಮಾಡಿವೆ. ತಮಿಳುನಾಡು ಮಾದರಿಯಲ್ಲೇ ನಮ್ಮ ಕರ್ನಾಟಕದಲ್ಲೂ “ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ’ ವನ್ನು 2013ರಲ್ಲಿಯೇ ಆರಂಭಿಸಲಾಗಿದೆ. ಆದರೆ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.