
ಸಂಜೆ ವಾಣಿ ವಾರ್ತೆ |
ಜಮಖಂಡಿ : ಮೇ ೧೨:ಜಮಖಂಡಿ ಅಖಂಡ ತಾಲೂಕಿನಲ್ಲಿ ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಐತಿಹಾಸಿಕ ದಾಖಲೆ ನಿರ್ಮಿಸಿದ್ದು, ಒಟ್ಟು ೭,೭೭೭ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರಲ್ಲಿ ಶೇ.೯೫.೮೫ ಫಲಿತಾಂಶ ದಾಖಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಬಸವಣ್ಣ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಶಿಕ್ಷಣ ಇಲಾಖೆ ಆರಂಭವಾದ ಬಳಿಕ ಇಷ್ಟೊಂದು ಪ್ರಮಾಣದ ಫಲಿತಾಂಶ ಇದೇ ಮೊದಲ ಬಾರಿಗೆ ದಾಖಲಾಗಿದ್ದು, ಇದು ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಈ ಯಶಸ್ಸಿಗೆ ಕಾರಣಕರ್ತರಾಗಿರುವ ಶಿಕ್ಷಕರು, ಮುಖ್ಯೋಪಾಧ್ಯಾಯರು, ಶಿಕ್ಷಣ ಇಲಾಖೆ ಸಿಬ್ಬಂದಿ ಹಾಗೂ ಪಾಲಕರಿಗೆ ಅಭಿನಂದನೆ ಸಲ್ಲಿಸಿದ ಅವರು, ಈ ವರ್ಷ ವಿಶೇಷವಾಗಿ ೨೫೩ ವಿದ್ಯಾರ್ಥಿಗಳು ೯೫ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು.
ರಾಜ್ಯ ಮಟ್ಟದಲ್ಲಿಯೂ ಜಮಖಂಡಿ ತಾಲೂಕಿನ ೧೮ ವಿದ್ಯಾರ್ಥಿಗಳು ರ್ಯಾಂಕ್ ಗಳನ್ನು ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ. ರಾಜ್ಯಕ್ಕೆ ೫ನೇ ರ್ಯಾಂಕ್ ಪಡೆದಿರುವ ನವೀನ್ ಕುಂಬಾರ ಹಾಗೂ ಸುಶಾಂತ್ ಗುರ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅಲ್ಲದೆ, ೬ನೇ ರ್ಯಾಂಕ್ ಪಡೆದ ಇಬ್ಬರು, ೭ನೇ ರ್ಯಾಂಕ್ ಪಡೆದ ಮೂವರು, ೮ನೇ ರ್ಯಾಂಕ್ ಪಡೆದ ಇಬ್ಬರು, ೯ನೇ ರ್ಯಾಂಕ್ ಪಡೆದ ಐವರು ಹಾಗೂ ೧೦ನೇ ರ್ಯಾಂಕ್ ಪಡೆದ ನಾಲ್ವರು ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ತಾಲೂಕಿನ ಒಟ್ಟು ೧೨೫ ಪ್ರೌಢಶಾಲೆಗಳ ಪೈಕಿ ೫೨ ಶಾಲೆಗಳು ಶೇ.೧೦೦ ಫಲಿತಾಂಶ ದಾಖಲಿಸಿದ್ದು, ಮತ್ತೊಂದು ೨೭ ಶಾಲೆಗಳಲ್ಲಿ ಕೇವಲ ಒಬ್ಬೊಬ್ಬ ವಿದ್ಯಾರ್ಥಿಗಳು ಮಾತ್ರ ಅನುತ್ತೀರ್ಣರಾಗಿದ್ದಾರೆ. ಆ ವಿದ್ಯಾರ್ಥಿಗಳ ಮರುಮೌಲ್ಯಮಾಪನಕ್ಕಾಗಿ ಎಸ್‌ಎಸ್‌ಎಲ್‌ಸಿ ಮಂಡಳಿಗೆ ಮನವಿ ಸಲ್ಲಿಸಲಾಗಿದೆ. ಮರುಮೌಲ್ಯಮಾಪನದಲ್ಲಿಯೂ ವಿದ್ಯಾರ್ಥಿಗಳು ಉತ್ತೀರ್ಣರಾದರೆ, ತಾಲೂಕಿನ ಶೇ.೭೦ಕ್ಕೂ ಹೆಚ್ಚು ಶಾಲೆಗಳು ಶೇ.೧೦೦ ಫಲಿತಾಂಶ ಸಾಧಿಸಿದ ಐತಿಹಾಸಿಕ ದಾಖಲೆಯಾಗಲಿದೆ ಎಂದು ಹೇಳಿದರು.
ರಬಕವಿ-ಬನಹಟ್ಟಿ ಕ್ಷೇತ್ರವನ್ನು ಪ್ರತ್ಯೇಕವಾಗಿ ಪರಿಗಣಿಸಿದಾಗ ಶೇ.೯೬.೩೯ ಫಲಿತಾಂಶದೊAದಿಗೆ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಜಮಖಂಡಿ ತಾಲೂಕು ಅಲ್ಪ ಅಂತರದಲ್ಲಿ ತೃತೀಯ ಸ್ಥಾನ ಪಡೆದಿದೆ. ಕೇವಲ ಶೇ.೦.೦೮ ಅಂತರದಿAದ ಈ ಸ್ಥಾನ ಬದಲಾಗಿದ್ದು, ಕೆಲವು ದೊಡ್ಡ ಶಾಲೆಗಳ ಕಡಿಮೆ ಫಲಿತಾಂಶದಿAದ ಈ ವ್ಯತ್ಯಾಸ ಉಂಟಾಗಿದೆ ಎಂದು ವಿವರಿಸಿದರು.
ಕೊನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರಿಗೆ ಹೃದಯಪೂರ್ವಕ ಅಭಿನಂದನೆ ಹಾಗೂ ಕೃತಜ್ಞತೆಗಳನ್ನು ಸಲ್ಲಿಸಿದರು.






















