
ಕೋಲಾರ,ಡಿ,೨-ಬ್ರಿಟಿಷ್ ಸೇನೆಯಲ್ಲಿಯೇ ಅಧಿಕಾರಿಯಾಗಿದ್ದು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮೇಜರ್ ಜಯಪಾಲ್ ಸಿಂಗ್‌ರನ್ನು ಸ್ವಾತಂತ್ರ್ಯ ನಂತರ ಬಂದ ಸರ್ಕಾರ ಜೈಲಿಗಟ್ಟುವ ಮೂಲಕ ಅವರನ್ನು ನಡೆಸಿಕೊಂಡ ರೀತಿ ಅಕ್ಷಮ್ಯ ಅಪರಾಧವಾಗಿದೆ ಎಂದು ಮಾಜಿ ಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಓದುಗ ಕೇಳುಗ ನಮ್ಮ ನಡೆ ೫೫ನೇ ಕಾರ್ಯಕ್ರಮದಲ್ಲಿ ಮೇಜರ್ ಜಯಪಾಲ್‌ಸಿಂಗ್ ನೆನಪುಗಳು ವಿಮೋಚನೆಯ ಸಮರದಲ್ಲಿ ಅನುವಾದಿತ ಕೃತಿ ಕುರಿತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ.ಈಗಲಾದರೂ ಮೇಜರ್ ಜಯಪಾಲ್‌ಸಿಂಗ್‌ರ ಹೋರಾಟವನ್ನು ಅರ್ಥ ಮಾಡಿಕೊಂಡು ಅವರಿಗೆ ಸೇನೆಯ ಅಧಿಕಾರಿಗಳ ಮೂಲಕ ಗೌರವ ಸಮರ್ಪಿಸಿ, ದೇಶದ ಜನರಿಗೆ ಹೆಮ್ಮೆಯಿಂದ ಪರಿಚಯಿಸುವ ಕಾರ್ಯವಾಗಬೇಕಿದೆ ಎಂದು ಅವರು ಪ್ರತಿಪಾದಿಸಿದರು.
ಜನರು ನಂಬಿಕೆ ಇಟ್ಟಿದ್ದ ರಾಜಕೀಯ ಪಕ್ಷಗಳು ವಿಭಜನೆಗಳಾಗುತ್ತಾ ಹೊಸ ಪಕ್ಷಗಳಾಗಿ ಉಗಮಗೊಳ್ಳುತ್ತಾ ಜನರ ವಿಶ್ವಾಸ ಕಳೆದುಕೊಂಡಿದ್ದರಿಂದ ಸಿಪಿಎಂ ಸಿದ್ದಾಂತವು ಕೋಣೆಗೆ ಸೀಮಿತವಾಯಿತು, ಕಾಂಗ್ರೆಸ್‌ಗೆ ಸಿದ್ದಾಂತವೇ ಇಲ್ಲದಿರುವುದರಿಂದ ನಾಗಪುರದ ಸಿದ್ದಾಂತವು ಚಲಾವಣೆಗೆ ಬರುವಂತಾಗಿದೆ ಎಂದು ಹೇಳಿದರು.
ದೇಶದ ಜನರೆಂದು ಕೋಮುವಾದಿ ಗಳಾಗಿರಲಿಲ್ಲ,ದೇಶ ವಿಭಜನೆಯಂತ ಸಂಕಷ್ಟದ ಪರಿಸ್ಥಿತಿಯಲ್ಲಿ ಜರುಗಿದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪರ್ಯಾಯವಾಗಿ ಸಿಪಿಎಂ ಪಕ್ಷವನ್ನು ಜನರು ವಿರೋಧ ಪಕ್ಷವಾಗಿ ಆಯ್ಕೆ ಮಾಡಿಕೊಂಡಿದ್ದರು. ಮತೀಯವಾದಿಗಳಿಗೆ ಮೊದಲ ಚುನಾವಣೆಯಲ್ಲಿ ಕೇವಲ ಶೇ.೫.೧ ರಷ್ಟು ಮತಗಳನ್ನಷ್ಟೇ ನೀಡಿದ್ದರು ಎಂದರು.
ಆದರೆ ಈಗ ಕೋಮುವಾದಿಗಳು ವಿಜೃಂಭಿಸುತ್ತಾ ಕೇಂದ್ರದಲ್ಲಿ ಆಡಳಿತ ನಡೆಸುವ ಸ್ಥಿತಿಗೆ ಬಂದಿರುವುದು ದೇಶದ ಜನರ ತಪ್ಪಲ್ಲ ನಮ್ಮಗಳ ರಾಜಕೀಯ ಪಕ್ಷಗಳ ತಪ್ಪಾಗಿದೆ ಎಂದು ಅಭಿಪ್ರಾಯಪಟ್ಟರು.
ಜಗತ್ತು ಇರುವವರೆವಿಗೂ ಎಡ ಮತ್ತು ಬಲ ಪಂಥೀಯವಾದ ಇದ್ದೇ ಇರುತ್ತದೆ, ಬದುಕನ್ನು ಎಲ್ಲರಿವೂ ಸಮಾನವಾಗಿ ಹಂಚುವುದೇ ಎಡಪಂಥೀಯವಾದವಾಗಿದ್ದು, ಇಂತಹ ಎಡಪಂಥದತ್ತಲೇ ನಾವೆಲ್ಲರೂ ವಾಲುತ್ತೇವೆ ಎಂದು ಸಮರ್ಥಿಸಿಕೊಂಡರು.
ದೇಶದ ಇಂದಿನ ಪರಿಸ್ಥಿತಿಗೆ ಕಾಂಗ್ರೆಸ್ ಪಕ್ಷವನ್ನು ಸರಾಸಗಟಾಗಿ ದೂರುವುದು ಸರಿಯಲ್ಲ ಎಂದು ವಾದಿಸಿದ ಅವರು, ಸ್ವಾತಂತ್ರ್ಯ ಪೂರ್ವ ಕಾಂಗ್ರೆಸ್‌ಗೆ ದೇಶವನ್ನು ದಾಸ್ಯದಿಂದ ವಿಮೋಚನೆಗೊಳಿಸುವ ಅಜೆಂಡಾ ಮಾತ್ರವೇ ಇತ್ತು. ಆದ್ದರಿಂದ ಈಗಿನ ರಾಜಕೀಯ ಪಕ್ಷ ಕಾಂಗ್ರೆಸ್ ಆಗಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ ಒಂದೇ ಎಂದು ಭಾವಿಸಬೇಕಾಗಿಲ್ಲ ಎಂದು ವಿವರಿಸಿದರು. ಕೃತಿ ಕುರಿತಂತೆ ಜನಶಕ್ತಿ ವಾರಪತ್ರಿಕೆ ಸಂಪಾದಕ ಡಾ.ಎಸ್.ವೈ.ಗುರುಶಾಂತ್ ಮಾತನಾಡಿ, ಮೇಜರ್ ಜಯಪಾಲ್‌ಸಿಂಗ್‌ರ ನೆನಪುಗಳು ಕೃತಿಯು ಬ್ರಿಟೀಷ್ ಸೇನೆಯಲ್ಲಿಯೇ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಾ ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪೂರಕವಾಗಿ ಕೆಲಸ ಮಾಡಿದವರ ಹೋರಾಟವನ್ನು ಪರಿಚಯಿಸುತ್ತದೆ ಎಂದರು.
ತನ್ನ ೧೪ ನೇ ವಯಸ್ಸಿನಲ್ಲಿಯೇ ಉಪ್ಪಿನ ಸತ್ಯಾಗ್ರಹದ ಮೂಲಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ್ದ ರೈತ ಕುಟುಂಬದ ಜಯಪಾಲ್‌ಸಿಂಗ್‌ರ ಮೇಲೆ, ೨೦ ಸಾವಿರ ಮಂದಿ ಹೋರಾಟಗಾರರನ್ನು ಕೇವಲ ಐದು ಮಂದಿ ಪೊಲೀಸರು ಚದುರಿಸಿದ್ದ ಘಟನೆಯಿಂದ ಪ್ರೇರೇಪಣೆಗೊಂಡು ಬ್ರಿಟೀಷ್ ಸೇನೆ ಸೇರಿದರಾದರೂ, ಅಲ್ಲಿದ್ದುಕೊಂಡೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ವಿಮೋಚನಾ ಸಮಿತಿಯನ್ನು ರಚಿಸಿಕೊಂಡು ಭೂಗತವಾಗಿ ಕೆಲಸ ಮಾಡಿದರು, ಸ್ವಾತಂತ್ರ್ಯಾನಂತರ ಸರಕಾರದ ಮುಂದೆ ಶರಣಾದರೂ ಅವರನ್ನು ಪೋರ್ಟ್‌ಬ್ಲೇರ್ ಜೈಲಿನಲ್ಲಿಡಲಾಗಿತ್ತು. ಅಲ್ಲಿಂದಲೂ ತಪ್ಪಿಸಿಕೊಂಡಿದ್ದ ಜಯಪಾಲ್‌ಸಿಂಗ್ ತೆಲಂಗಾಣ ಹೋರಾಟದಲ್ಲಿ ಭಾಗವಹಿಸಿ ಅದೇ ನೆಲದಲ್ಲಿ ಕೊನೆಯುಸಿರೆಳೆದಿದ್ದರೆಂದು ಕೃತಿಯ ಅಂಶಗಳನ್ನು ಆಧರಿಸಿ ಮಾತನಾಡಿದರು.
ದೇಶವು ಸ್ವಾತಂತ್ರ್ಯಗೊಳ್ಳುವ ಸಂದರ್ಭದಲ್ಲಿ ಬ್ರಿಟೀಷರು ದೇಶ ವನ್ನು ಕೋಮುವಾದದ ಮೇಲೆ ವಿಭಜಿಸುವ ಪ್ರಯತ್ನ ಮಾಡಿದ್ದರು, ಈಗಲೂ ಕೋಮುವಾದ ದೇಶವನ್ನು ವಿಭಜಿಸುತ್ತಾ ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಸಾಧನವಾಗಿರುವುದು ವಿಪರ್ಯಾಸ ಎಂದರು.
ಅನುವಾದಿತ ಕೃತಿಕಾರ ವಿಶ್ವಕುಂದಾ ಪುರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆದಿಮ ರಂಗ ವಿದ್ಯಾರ್ಥಿ ದರ್ಶನ್ ಹಾಗೂ ಓದುಗ ಕೇಳುಗ ಬಳದ ಪ್ರಮುಖರಾದ ಎಚ್.ಎ.ಪುರುಷೋತ್ತಮ್ ಆಶಯ ಗೀತೆಗಳನ್ನು ಹಾಡಿದರು. ಜೆಜಿ ನಾಗರಾಜ್ ನಿರೂಪಿಸಿ, ಹ.ಮಾ.ರಾಮಚಂದ್ರ ವಂದಿಸಿದರು.


























