
ಬೆಂಗಳೂರು,ಏ.೯-ಆಟವಾಡುವಾಗ ಮೊದಲನೇ ಮಹಡಿಯಿಂದ ಬಿದ್ದು ಒಂದೂವರೆ ವರ್ಷದ ಕಂದಮ್ಮ ಗಂಭೀರ ಗಾಯಗೊಂಡಿರುವ ನಾಯಂಡಹಳ್ಳಿಯಲ್ಲಿ ನಡೆದಿದೆ.
ಆಯತಪ್ಪಿ ಬಿದ್ದ ಪರಿಣಾಮ ಒಂದೂವರೆ ವರ್ಷದ ಹೆಣ್ಣು ಮಗು ಸಹನಾಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ಏಪ್ರಿಲ್ ೬ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಮಹಡಿಯಿಂದ ನವೀನ್ ಮತ್ತು ಜಯಶ್ರೀ ದಂಪತಿಯ ಪುತ್ರಿ ಸಹನಾ ಬೀಳುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಗುವಿನ ಆರೋಗ್ಯದ ಬಗ್ಗೆ ತಂದೆ ನವೀನ್ ಮಾಹಿತಿ ನೀಡಿದ್ದಾರೆ. ಬಸವನಗುಡಿಯ ರಂಗದೊರೆ ಸ್ಮಾರಕ ಆಸ್ಪತ್ರೆಯ ಐಸಿಯುನಲ್ಲಿ ಸಹನಾಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆಕೆಯ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಮಗುವಿನ ತಲೆ ಭಾಗಕ್ಕೆ ಸ್ವಲ್ಪ ಗಾಯವಾಗಿದ್ದು ಬಿಟ್ಟರೆ ಮತ್ತೆಲ್ಲಿಯೂ ಏನೂ ಆಗಿಲ್ಲ. ತಲೆಗೆ ಮೂರು ಹೊಲಿಗೆ ಹಾಕಲಾಗಿದ್ದು, ಸಹನಾ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ ಎಂದು ತಿಳಿಸಿದ್ದಾರೆ.
ಮಗುವಿನ ಜೊತೆಗೇ ಇದ್ದ ತಾಯಿ ಜಯಶ್ರೀ ಹಾಲು ಕಾಯಿಸಲು ಇಟ್ಟಿದ್ದರು. ಹೀಗಾಗಿ ಹಾಲು ಉಕ್ಕಿತಾ ಎಂದು ನೋಡಿ ಬರಲು ಅರೆಕ್ಷಣ ಅವರು ತೆರಳಿದ್ದರು. ಅಷ್ಟರಲ್ಲಿ ಮಗು ಸಹನಾ ಮಹಡಿಯಿಂದ ಬಿದ್ದು ಗಾಯಗೊಂಡಿದೆ.
ಹೊರಗಡೆ ಇದ್ದ ಚೇರ್ ಹತ್ತಿದ ಪರಿಣಾಮ ಮಗುವಿಗೆ ಆಯತಪ್ಪಿದೆ. ಮಗು ಕೆಳಗಡೆ ಬಿದ್ದಿದ್ದನ್ನು ಕಂಡ ರಸ್ತೆಯಲ್ಲಿ ತೆರಳುತ್ತಿದ್ದ ಜನ ಕಿರುಚಾಡುತ್ತಿದ್ದಂತೆ ಹೊರಬಂದು ಮಗುವಿನ ಸ್ಥಿತಿ ಕಂಡ ಜಯಶ್ರೀ ಲೋ ಬಿಪಿ ಉಂಟಾಗಿ ಅಸ್ವಸ್ಥರಾಗಿದ್ದು ಅವರೂ ಚೇತರಿಸಿಕೊಂಡಿದ್ದು, ದಂಪತಿಗೆ ಸಹನಾ ಏಕೈಕ ಮಗು ಎನ್ನಲಾಗಿದೆ. ಮಗು ಸಹಾನಳ ತಂದೆ ನವೀನ್ ಆಟೋ ಚಾಲಕನಾಗಿದ್ದರು ಎಂದು ತಿಳಿದುಬಂದಿದೆ.























