
ತುಮಕೂರು, ಮೇ ೫- ರಾಜ್ಯ ಹಾಗೂ ದೇಶದಾದ್ಯಂತ ಶೈಕ್ಷಣಿಕ ನಗರಿಯಾಗಿ ಗುರುತಿಸಿಕೊಂಡು ಇದೀಗ ವಿಶ್ವದರ್ಜೆ ಮಟ್ಟದಲ್ಲಿ ಕ್ರೀಡಾ ನಗರಿಯಾಗುತ್ತಿರುವ ಕಲ್ಪತರುನಾಡು ತುಮಕೂರು ನಗರದಲ್ಲಿ
ಮೇ ೧೦ ರವರೆಗೆ ಆಯೋಜಿಸಲಾಗಿರುವ ಐಟಿಎಫ್ ಡಬ್ಲ್ಯೂ ೩೫ ರ್‍ಯಾಂಕಿಂಗ್ ತುಮಕೂರು ಓಪನ್ ಟೂರ್ನಿಗೆ ಇಂದು ವಿದ್ಯುಕ್ತ ಚಾಲನೆ ದೊರೆಯಿತು.
ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ನಿರ್ಮಿಸಲಾಗಿರುವ ವಿಶ್ವದರ್ಜೆಯ ಟೆನ್ನಿಸ್ ಅಂಕಣದಲ್ಲಿ ಕರ್ನಾಟಕ ರಾಜ್ಯ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಬಲೂನ್‌ಗಳನ್ನು ಹಾರಿ ಬಿಡುವ ಮೂಲಕ ಈ ಅಂತಾರಾಷ್ಟ್ರೀಯ ಮಹಿಳಾ ಓಪನ್ ಟೆನ್ನಿಸ್ ಕ್ರೀಡಾಕೂಟವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗೃಹ ಸಚಿವ ಡಾ. ಪರಮೇಶ್ವರ್ ಅವರು, ತುಮಕೂರು ಎಲ್ಲ ರೀತಿಯಲ್ಲೂ ವೇಗವಾಗಿ ಬೆಳೆಯುತ್ತಿರುವ ನಗರ. ಹಾಗಾಗಿ ತುಮಕೂರನ್ನು ಕ್ರೀಡೆಯಲ್ಲೂ ವಿಶ್ವದರ್ಜೆ ಮಟ್ಟಕ್ಕೆ ಕೊಂಡೊಯ್ಯುವುದು ತಮ್ಮ ಕನಸಾಗಿದೆ ಎಂದರು.
ರಾಜ್ಯ ಮತ್ತು ದೇಶದಲ್ಲಿ ತುಮಕೂರು ನಗರ ಕ್ರೀಡಾನಗರಿಯಾಗಿ ಅಭಿವೃದ್ಧಿ ಹೊಂದಬೇಕು ಎಂಬ ಉದ್ದೇಶದಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ. ಕ್ರೀಡೆಗೆ ಅಗತ್ಯವಾಗಿ ಬೇಕಾಗಿರುವ ಕ್ರೀಡಾಂಗಣ ಸೇರಿದಂತೆ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಈಗಾಗಲೇ ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಹಾಕಿ ಕ್ರೀಡಾಂಗಣ, ಈಜು ಕೊಳ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಸಹ ನಿರ್ಮಾಣವಾಗುತ್ತಿದೆ ಎಂದ ಅವರು, ತುಮಕೂರು ಅಮಾನಿಕೆರೆಯಲ್ಲಿ ಕಯಾಕಿಂಗ್ ಸಹ ನಡೆಸಲಾಗುತ್ತಿದೆ ಎಂದು ಹೇಳಿದರು.
ರಾಜಕಾರಣವೂ ಒಂದು ರೀತಿಯ ಕ್ರೀಡೆ ಇದ್ದಂತೆ. ರಾಜಕಾರಣದಲ್ಲಿ ದೈಹಿಕವಾಗಿ ಕ್ರೀಡೆ ಆಡದಿದ್ದರೂ ಮಾನಸಿಕವಾಗಿ ಸದಾ ಕ್ರೀಡಾ ಚಟುವಟಿಕೆಯಿಂದ ಕೂಡಿರಬೇಕು ಎಂದು ಅವರು ತಿಳಿಸಿದರು.
ಕನ್ನಿಕಾ ಪರಮೇಶ್ವರ್ ಮಾತನಾಡಿ, ಟೆನ್ನಿಸ್ ಕ್ರೀಡೆ ಅಷ್ಟು ಸುಲಭವದ ಆಟವಲ್ಲ. ಈ ಕ್ರೀಡೆಯಲ್ಲಿ ಪಾಲ್ಗೊಳ್ಳುವವರು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿರುವ ಜತೆಗೆ ಏಕಾಗ್ರತೆ ಬಹು ಮುಖ್ಯವಾಗಿದೆ ಎಂದರು.
ಶಾಸಕರಾದ ಸುರೇಶ್‌ಗೌಡ, ಜ್ಯೋತಿಗಣೇಶ್ ಹಾಗೂ ಸಿ.ಬಿ. ಸುರೇಶ್ ಬಾಬು ಅವರು ಮಾತನಾಡಿ, ತುಮಕೂರು ಜಿಲ್ಲೆ ಹಾಗೂ ನಗರವನ್ನು ಶಿಕ್ಷಣದ ಹಬ್ ಜತೆಗೆ ಕ್ರೀಡಾ ಹಬ್ ಆಗಿಯೂ ಬೆಳೆಸುವುದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ರವರ ಕನಸಾಗಿದೆ. ಇದಕ್ಕೆ ನಮ್ಮೆಲ್ಲರ ಸಹಕಾರ ಸದಾ ಇದ್ದೇ ಇರುತ್ತದೆ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಗೋವಿಂದರಾಜು, ಜ್ಯೋತಿಗಣೇಶ್, ಸುರೇಶ್‌ಗೌಡ, ಸುರೇಶ್‌ಬಾಬು, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಕಪೂರ್, ತುಮಕೂರು ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಸುಶಾನ್ ಕಪೂರ್, ಸುಪ್ರೀತ್, ಅಮರನಾಥ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿ.ಪಂ. ಸಿಇಓ ಬಿ.ವಿ. ಅಶ್ವಿಜ, ನಿವೃತ್ತ ಐಎಎಸ್ ಅಧಿಕಾರಿ ಎಂ.ಬಿ. ದ್ಯಾಬೇರಿ ಉಪಸ್ಥಿತರಿದ್ದರು.



























