
ಮಧುಗಿರಿ, ಡಿ. ೨೫- ಶಿಕ್ಷಣವಂತರಾಗಲು ಕಠಿಣ ಪರಿಶ್ರಮ ಅಗತ್ಯ. ನಿಮ್ಮ ಬದುಕಲ್ಲಿ ಶಿಕ್ಷಣ ಒಲಿದು ಬಂದರೆ ಯಾವ ಸಾಧನೆ ಮಾಡಲು ಕೂಡಾ ದಾರಿ ಸುಗಮವಾಗಿರಲಿದೆ ಎಂದು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ವೈದ್ಯರಾದ ಡಾ.ವಿಜಯಕುಮಾರ್ ಅಭಿಪ್ರಾಯಪಟ್ಟರು.
ಪಟ್ಟಣದ ಚೇತನ ಅಂಗ್ಲ ಶಾಲೆಯ ಚೇತನ ವೈಭವ -೨೦೨೫ರ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯೆ ಎಂಬುದನ್ನು ಒಲಿಸಿಕೊಳ್ಳಲು ಮಕ್ಕಳು ಕಠಿಣ ಪರಿಶ್ರಮಪಡಬೇಕು. ಯಾವುದೇ ತರಗತಿಗೆ ತಪ್ಪದೆ ಹಾಜರಾಗಬೇಕು. ತರಗತಿಯಲ್ಲಿ ನಡೆಸಿದ ಪಾಠವನ್ನು ಶ್ರದ್ಧೆಯಿಂದ ಕಲಿಯಬೇಕು. ಆಗ ಮಾತ್ರ ಫಲಿತಾಂಶದಲ್ಲಿ ಸಾಧನೆ ಮಾಡಬಹುದು. ಕಲಿಕೆಯ ಸಂದರ್ಭದಲ್ಲಿ ಯಾವುದೇ ವಿಚಾರಕ್ಕೆ ಕಿವಿಗೊಡದೆ ವಿದ್ಯೆಗೆ ಮಾತ್ರ ಪ್ರಾಮುಖ್ಯತೆ ನೀಡಬೇಕು. ನಾವು ಈ ಸ್ಥಾನಕ್ಕೆ ಬರಲು ಹೆತ್ತವರು, ಗುರುಗಳು ಹಾಗೂ ಹಲವರ ಕೊಡುಗೆ ಇದೆ. ನನ್ನ ಜತೆ ವಿದ್ಯಾಭ್ಯಾಸ ಮಾಡಿದವರು ಸರ್ಕಾರದ ವಿವಿಧ ಹುದ್ದೆಯಲ್ಲಿದ್ದು ಅದಕ್ಕೆ ಚೇತನ ಶಾಲೆಯ ಶಿಕ್ಷಣ ವ್ಯವಸ್ಥೆ ಕಾರಣ. ನೀವೆಲ್ಲ ಈ ಚೇತನ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವುದು ನಿಜಕ್ಕೂ ಅದೃಷ್ಟ ಎನ್ನಬಹುದು ಎಂದರು.
ಈ ಶಾಲೆಯು ಮಕ್ಕಳಿಗೆ ಹಾಕಿಕೊಡುವ ಅಡಿಪಾಯವು ನಿಮ್ಮ ಬದುಕಿಗೆ ಸ್ಪಷ್ಟ ಭದ್ರತೆಯನ್ನು ನೀಡುತ್ತದೆ. ಈಗ ನಾನು ಜಯದೇವ ಆಸ್ಪತ್ರೆಯಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದು ಮಧುಗಿರಿಯಿಂದ ಬಂದ್ದಿದ್ದೇವೆ ಎಂದರೆ ಏನೋ ಮನಸ್ಸಿಗೆ ನಮ್ಮವರನ್ನು ಕಂಡಂತಹ ನೆಮ್ಮದಿ. ಅದರಲ್ಲಿ ಯಾರು ಲಭ್ಯರಾದರೂ ಅವರಿಗೆಲ್ಲ ಪ್ರಾಮಾಣಿಕವಾಗಿ ಆರೋಗ್ಯ ಸೇವೆ ನೀಡಿದ ತೃಪ್ತಿ ಇದೆ. ನೀವೂ ಕೂಡಾ ಕಲಿತ ಶಾಲೆ, ಊರನ್ನು ಹಾಗೂ ನಮಗೆ ಪರೋಕ್ಷವಾಗಿ ಸಹಾಯ ಮಾಡಿದ ಈ ಸಮಾಜವನ್ನು ಮರೆಯಬಾರದು. ನೀವು ಕಲಿತ ವಿದ್ಯೆಗನುಗುಣವಾಗಿ ಸಿಕ್ಕ ಅಧಿಕಾರವನ್ನು ಈ ಸಮಾಜಕ್ಕೆ ಉಪಯೋಗಿಸಬೇಕು. ಅಗಲೇ ನಮ್ಮವರು ಎಂಬ ಭಾವನೆ ಶಾಶ್ವತವಾಗಿ ಇರಲಿದೆ ಎಂದರು.
ಬಿಇಓ ಹನುಮಂತರಾಯಪ್ಪ ಮಾತನಾಡಿ, ಚೇತನ ಶಾಲೆ ಹಿಂದೆ ಮಧುಗಿರಿಯಲ್ಲಿ ೧೯೮೧ ಇದ್ದ ಮೊದಲ ಅಂಗ್ಲ ಮಾಧ್ಯಮದ ಶಾಲೆ. ಇಂದು ಅದು ಬೃಹತ್ತಾಗಿ ಬೆಳೆದಿದೆ. ಅದೇ ರೀತಿಯ ಶಿಸ್ತು ಹಾಗೂ ಫಲಿತಾಂಶವನ್ನು ನೀಡುತ್ತಾ ಬಂದಿದ್ದಾರೆ. ಇಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಕಲಿತು ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರೇ ಮಾದರಿಯಾಗಿದ್ದು ನಿಮಗೆ ಸಹಕಾರಿಯಾಗಿದೆ. ಕಲಿಕೆಯ ಜತೆಗೆ ಕ್ರೀಡೆ, ವಿಜ್ಞಾನ ಸಂವಹನ ಸೇರಿದಂತೆ ಹಲವು ಪ್ರತಿಭೆಗಳು ಈ ಶಾಲೆಯಲ್ಲಿದ್ದಾರೆ. ಎಲ್ಲಿ ಶಿಕ್ಷಣ ಚೆನ್ನಾಗಿರುತ್ತೋ ಅಲ್ಲಿ ಮಕ್ಕಳನ್ನು ಹೆತ್ತವರು ದಾಖಲು ಮಾಡುತ್ತಾರೆ. ಅದರಲ್ಲಿ ಚೇತನ ಶಾಲೆ ಯಶಸ್ಸು ಕಂಡಿದ್ದು ಒಳ್ಳೆಯದಾಗಲಿ. ಈಗ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಲಿದ್ದು ಮಕ್ಕಳು ಹೆಚ್ಚು ಅಧ್ಯಯನಶೀಲರಾಗಿ ಶಾಲೆಗೆ ಹೆಸರು ತರಬೇಕು. ಅದು ನಿಮ್ಮ ಸಾಧನೆಗೆ ಅಡಿಪಾಯವಾಗಲಿದೆ ಎಂದರು.
ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ತುಂಗೋಚಿ ರಾಮಣ್ಣ ಮಾತನಾಡಿ, ೪೫ ವರ್ಷದಿಂದ ಈ ಶಾಲೆಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ವೈದ್ಯರು, ಇಂಜಿನಿಯರ್‌ಗಳು, ಐಎಎಸ್, ಐಆರ್‌ಎಸ್, ಹಾಗೂ ಕೆಎಎಸ್ ಮಾಡಿದ್ದು ರಾಜ್ಯ ಹಾಗೂ ಕೇಂದ್ರದಲ್ಲಿ ಸೇವೆ ಸಲ್ಲಿಸಿದ್ದು ಇದೇ ನಮ್ಮ ಶಾಲೆಗೆ ಹೆಮ್ಮೆ. ಇಂತಹ ವ್ಯಕ್ತಿಗಳನ್ನು ರೂಪಿಸುವಲ್ಲಿ ಚೇತನ ಶಾಲೆ ಮಾಡಿರುವ ಸಾಧನೆ ನಿಜಕ್ಕೂ ಸ್ಮರಣೀಯವಾದುದು. ೧೯೮೨ ರಲ್ಲಿ ಮಧುಗಿರಿಯಲ್ಲಿ ಆರಂಭವಾದ ಮೊದಲ ಅಂಗ್ಲ ಶಾಲೆಗೆ ಗಡಿಭಾಗದಿಂದ ಜಟಕಾ ಗಾಡಿಯಿಂದ ಮಕ್ಕಳನ್ನು ಕರೆತಂದು ವಿದ್ಯಾಭ್ಯಾಸ ಕೊಡಿಸಿದ್ದ ಪೋಷಕರು ನಮ್ಮ ಶಾಲೆಗೆ ಶಕ್ತಿ ತುಂಬಿದ್ದರು. ಇಂತಹ ಪೋಷಕರ ಅಶೀರ್ವಾದದಿಂದಲೇ ಈ ಶಾಲೆ ಇಷ್ಟು ಎತ್ತರಕ್ಕೆ ಬೆಳೆದಿದ್ದು ಈ ಪ್ರೀತಿ ಸದಾ ಮುಂದುವರೆಯಲಿ ಎಂದರು.
ಪಿಎಸ್‌ಐ ಎಂ.ಎಸ್.ಚಂದ್ರಶೇಖರ್ ಮಾತನಾಡಿ, ಬಾಲ್ಯದಲ್ಲಿ ವಿದ್ಯೆಗೆ ಮಹತ್ವ ನೀಡಬೇಕು. ಯಾವುದೇ ಕಾರಣಕ್ಕೂ ಮಾದಕ ವಸ್ತುಗಳ ಬಗ್ಗೆ ಅಸಕ್ತಿ ತೋರದೆ ನಿರ್ಲಕ್ಷವಹಿಸಬೇಕು. ಅಂತಹ ಘಟನೆ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ಪೊಲೀಸರಿಗೆ ತಿಳಿಸಿದರೆ ಅವರ ಮಾಹಿತಿ ಗೌಪ್ಯವಾಗಿಟ್ಟು ಸಮಾಜದಲ್ಲಿ ಗುಪ್ತವಾಗಿ ನಡೆಯುವ ಮಾದಕ ವಸ್ತುಗಳ ಮಾರಾಟ ಹಾಗೂ ಬಳಕೆ ತಡೆಯಲು ಸಾಧ್ಯವಾಗುತ್ತದೆ. ನಿಮ್ಮ ಬದುಕು ಉತ್ತಮ ಸಮಾಜಕ್ಕಾಗಿ ಮೀಸಲಾಗಬೇಕು. ದುಶ್ಚಟಗಳಿಂದ ದೂರವಿರಿ ಎಂದರು.
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದವರಿಗೆ ೧ ಲಕ್ಷ ರೂ. ಬಹುಮಾನ, ಜಿಲ್ಲೆಯ ಪ್ರಥಮ ಸ್ಥಾನಕ್ಕೆ ೫೦ ಸಾವಿರ ಹಾಗೂ ತಾಲ್ಲೂಕಿಗೆ ಮೊದಲ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ೨೫ ಸಾವಿರ ಬಹುಮಾನ ನೀಡುವುದಾಗಿ ಕಾರ್ಯದರ್ಶಿ ತುಂಗೋಟಿ ರಾಮಣ್ಣ ಘೋಷಿಸಿದರು.
ಕಾರ್ಯಕ್ರಮದಲ್ಲಿ ಇಸಿಓ ರಾಘವೇಂದ್ರ, ಪ್ರಾಂಶುಪಾಲರಾದ ಪಾರ್ಥಸಾರಥಿ, ಮುಖ್ಯ ಶಿಕ್ಷಕಿ ರಜನಿ ಮತ್ತಿತರರು ಭಾಗವಹಿಸಿದ್ದರು.


























