
ನವದೆಹಲಿ, ಮೇ.೨೮-೨೦೨೫-೨೬ರ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸುವ ದಿನಾಂಕವನ್ನು ಆದಾಯ ತೆರಿಗೆ ಇಲಾಖೆಯು ಜು.೩೧ರಿಂದ ಸೆ.೧೫ಕ್ಕೆ ವಿಸ್ತರಿಸಿದೆ.
ತಮ್ಮ ಖಾತೆಗಳನ್ನು ಲೆಕ್ಕಪರಿಶೋಧನೆ ಮಾಡಿಸಿಕೊಳ್ಳುವ ಅಗತ್ಯವಿಲ್ಲದ ವ್ಯಕ್ತಿಗಳು ಮತ್ತು ಸಂಸ್ಥೆಗಳು ಜು.೩೧ರೊಳಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕಾಗಿತ್ತು.
ಅಧಿಸೂಚಿತ ಐಟಿಆರ್‌ಗಳಲ್ಲಿ ಪರಿಚಯಿಸಲಾದ ವ್ಯಾಪಕ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಐಟಿಆರ್ ವ್ಯವಸ್ಥೆಯ ಸಿದ್ಧತೆ ಮತ್ತು ಬಿಡುಗಡೆಗೆ ಅಗತ್ಯವಿರುವ ಸಮಯವನ್ನು ಪರಿಗಣಿಸಿ, ಅಂತಿಮ ದಿನಾಂಕವನ್ನು ವಿಸ್ತರಿಸಲಾಗಿದೆ.
ತೆರಿಗೆದಾರರಿಗೆ ಸುಗಮ ಮತ್ತು ಅನುಕೂಲಕರ ಫೈಲಿಂಗ್ ವ್ಯವಸ್ಥೆ ಮಾಡಿಕೊಡಲು, ಜು. ೩೧ರಂದು ಮೂಲತಃ ನಿಗದಿಯಾಗಿದ್ದ ಐಟಿಆರ್ ಸಲ್ಲಿಸುವ ಅಂತಿಮ ದಿನಾಂಕವನ್ನು ಸೆ.೧೫ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೇಳಿಕೆಯಲ್ಲಿ ತಿಳಿಸಿದೆ.