
ಅಫಜಲಪುರ:ಫೆ.28:ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಆಧಾರ ರಹಿತವಾಗಿ ಶಾಸಕ ಎಂ.ವೈ.ಪಾಟೀಲ್,ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಜೆಡಿಎಸ್ ಮುಖಂಡರು ಈ ಹಿಂದೆ ಸಕ್ಕರೆ ಕಾರ್ಖಾನೆಯ ಜನರಲ್ ಮ್ಯಾನೇಜರ್ ಗೆ ರಸ್ತೆಯಲ್ಲಿ ತಡೆದು ಹಲ್ಲೆ ನಡೆಸಿ, ದರೋಡೆ ಮಾಡಿ, ರೌಡಿ ಶೀಟರ್ ಕೇಸ್ ಹಾಕಿಕೊಂಡು ಗಡಿಪಾರು ಆಗಿರುವವರು ಈಗ ಅಭಿವೃದ್ಧಿ ಕೆಲಸದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಲಚ್ಚಪ್ಪ ಜಮಾದಾರ ಕಿಡಿಕಾರಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು,ಕಾಂಗ್ರೆಸ್ ಪಕ್ಷದ ನಾಯಕರಿಗೆ ಜೆಡಿಎಸ್ ಪಕ್ಷದ ಮುಖಂಡರು ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲ್ ಹಾಕಿರುವುದು ಹಾಸ್ಯಾಸ್ಪದವಾಗಿದೆ.ಬಹಿರಂಗ ಚರ್ಚೆ ಏಕೆ ಬೇಕಿದ್ದರೆ ನೇರ ನೇರ ಚರ್ಚೆ ಮಾಡೋಣ ಬನ್ನಿ, ಈ ಹಿಂದೆ ರಕ್ಷಣಾ ವೇದಿಕೆ ಹೆಸರಿನ ಮೇಲೆ ಇವರು ಹಫ್ತಾ ವೇದಿಕೆ ಮಾಡಿಕೊಂಡು ನೂರಾರು ಅಧಿಕಾರಿಗಳ ಮೇಲೆ ದೂರು ಕೊಟ್ಟು ಏನೆಲ್ಲಾ ಮಾಡಿದ್ದಾರೆ. ಅಲ್ಲದೇ ಒಂದೇ ಒಂದು ಪ್ರಕರಣವೂ ಕೂಡ ಅಂತ್ಯಕ್ಕೆ ತೆಗೆದುಕೊಂಡು ಹೋಗದೆ ಕೇವಲ ಅರಬಿ ಹಾವು ಬಿಡುವದು ನಡೆದಿದೆ ಅಷ್ಟೇ. ಕೇಂದ್ರದಲ್ಲಿ ನಿಮ್ಮದೇ ಪಕ್ಷದ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿದ್ದಾರೆ,ಹೀಗಾಗಿ ಕೇಂದ್ರ ಸರ್ಕಾರದಿಂದ ಅನುದಾನ ತಂದು ಅಫಜಲಪುರ ಅಭಿವೃದ್ಧಿಗೆ ಸಹಕರಿಸಿ,ಅದು ಬಿಟ್ಟು ದಿನ ಬೆಳಗಾದರೆ ಸಾಕು ಪತ್ರಿಕಾಗೋಷ್ಠಿ ನಡೆಸುವ ಚಾಳಿ ನಿಲ್ಲಿಸಿ,ಈ ಹಿಂದೆ ಭೀಮಾ ನದಿ ನೀರಿಗಾಗಿ ಉಪವಾಸ ಸತ್ಯಾಗ್ರಹ ಕೈಗೊಂಡಾಗ ಶಾಸಕರು ಸೇರಿದಂತೆ ಎಲ್ಲರೂ ಬೆಂಬಲಿಸಿದ್ದಕ್ಕೆ ಹೋರಾಟ ಯಶಸ್ವಿಯಾಗಿತ್ತು.
ಈಗ ಕುಮಾರಸ್ವಾಮಿಯ ಮೂಲಕ ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿ ಭೀಮಾ ನದಿಯ ಸಮಸ್ಯೆ ಶಾಶ್ವತವಾಗಿ ಬಗೆಹರಿಸಿ,ಅಲ್ಲದೇ ನಿಮ್ಮ ಗ್ರಾಮ ಮತ್ತು ಅಕ್ಕ ಪಕ್ಕದ ಗ್ರಾಮಗಳಲ್ಲಿ ಬಸ್ ನಿಲ್ದಾಣಗಳು ಇಲ್ಲ,ಹೀಗಾಗಿ ಕೆಕೆಆರ್ ಟಿಸಿ ಅಧ್ಯಕ್ಷರಿಗೆ ಹೇಳಿ ಬಸ್ ನಿಲ್ದಾಣಗಳು ಮಾಡಿಕೊಳ್ಳಿ ಇದರಿಂದ ಅಭಿವೃದ್ಧಿ ಆಗಲಿದೆ.ನಾನು ಕೂಡ ಘತ್ತರಗಾ ಗ್ರಾಮಕ್ಕೆ ಬಸ್ ನಿಲ್ದಾಣ ಮಾಡಿ ಎಂದು ಮನವಿ ಮಾಡಿದ್ದೇನೆ.ಕೆಕೆಆರ್ ಟಿಸಿ ಅಧ್ಯಕ್ಷರು 1 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ಮಾಡೋಣ ಎಂದು ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರಣು ಕುಂಬಾರ ಸೇರಿದಂತೆ ಅನೇಕ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದ್ದಕ್ಕೆ ಅವರ ವಿರುದ್ಧವು ಇಲ್ಲ ಸಲ್ಲದ ಆರೋಪ ಮಾಡುತ್ತಿರುವುದು ಖಂಡನೀಯವಾಗಿದೆ.
























