ಡಾಕ್ಟರ್ ರಾಧಾಕೃಷ್ಣನ್ ರವರ ಬೀಳ್ಕೊಡುಗೆ ನೆನಪಿಸುವಂತಿದೆ

ವಿಜಯಪುರ.ಜು ೨: ತಮ್ಮ ನಿವೃತ್ತಿಯ ಸಂದರ್ಭದಲ್ಲಿ ಶಾಲಾ ಮಕ್ಕಳು ಹಾಗೂ ಸಹೋದ್ಯೋಗಿಗಳು ನೀಡುತ್ತಿರುವ ಪೂರ್ಣ ಕುಂಭ ಸ್ವಾಗತದೊಂದಿಗಿನ ಭರ್ಜರಿ ಬೀಳ್ಕೊಡುಗೆಯು ತಮಗೆ ಡಾ.ರಾಧಾಕೃಷ್ಣನ್‌ರವರು ಮೈಸೂರು ವಿಶ್ವವಿದ್ಯಾನಿಲಯದಿಂದ ದೆಹಲಿಗೆ ಹೋದ ಸಂದರ್ಭದಲ್ಲಿ ಅವರನ್ನು ರೈಲ್ವೆ ನಿಲ್ದಾಣಕ್ಕೆ ಸಾರೋಟಿನಲ್ಲಿ ಕರೆದುಕೊಂಡು ಹೋಗಿ, ವಿದ್ಯಾರ್ಥಿಗಳು ಬಿಟ್ಟಗಳಿಗೆ ನೆನಪಾಗುತ್ತಿದೆ ಎಂದು ಇವರೆಲ್ಲರ ಪ್ರೀತಿಗೆ ತಾವು ಕೃತಜ್ಞರು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ ವೆಂಕಟೇಶ್ ತಿಳಿಸಿದರು.


ಅವರು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲರಾಗಿ ನಿವೃತ್ತವಾದಂತಹ ಸಂದರ್ಭದಲ್ಲಿ ಎಲ್ಲರೂ ನೀಡಿದ ಅಭಿನಂದನೆ ಸ್ವೀಕರಿಸಿ, ಮಾತನಾಡುತ್ತಿದ್ದರು.


ಕಳೆದ ೩೧ ವರ್ಷಗಳಲ್ಲಿ ಅದರಲ್ಲಿಯೂ ವಿಜಯಪುರ ಪಟ್ಟಣದ ಉಪಪ್ರಾಂಶುಪಾಲರಾಗಿ ಸಲ್ಲಿಸಿದ ಏಳು ವರ್ಷಗಳ ಸೇವೆಯಲ್ಲಿ ಶಾಲಾ ಮಕ್ಕಳಿಗೆ ಅನುಕೂಲವಾಗುವಂತಹ ಸಾಕಷ್ಟು ಅನುಕೂಲಗಳನ್ನು ಬೇರೆಡಯಿಂದ ತಂದು ನೀಡಿದ್ದು, ಶಾಲೆಯೊಳಗಿನ ವಿಶಾಲ ಆವರಣಕ್ಕೆ ಟೈಲ್ಸ್ ಗಳನ್ನು ಹಾಕಿಸಿದ್ದು, ಶಾಲಾ ಮಕ್ಕಳಿಗೆ ಟ್ರ್ಯಾಕ್ ಶೂಟ್ ವಿತರಿಸುವುದರೊಂದಿಗೆ, ನಿರಂತರ ವಿದ್ಯುತ್ ಪೂರೈಕೆಗೆ ಸೋಲಾರ್ ಸಿಸ್ಟಮ್ ಅಳವಡಿಸಿರುವುದು, ಶುದ್ಧ ಕುಡಿಯುವ ನೀರಿನ ಘಟಕ, ಸ್ಮಾರ್ಟ್ ಕ್ಲಾಸ್ ಗಳ ವ್ಯವಸ್ಥೆ, ಶಾಲೆಯ ಗೋಡೆಗಳ ಮೇಲೆ ಮಕ್ಕಳನ್ನು ಉತ್ತೇಜಿಸುವ ಆಕರ್ಷಕ ಚಿತ್ರಗಳು ಮುಂತಾಗಿ ಹತ್ತು ಹಲವಾರು ಮಕ್ಕಳ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸುವುದರೊಂದಿಗೆ ಫಲಿತಾಂಶದಲ್ಲಿಯೂ ಉತ್ತಮ ಫಲಿತಾಂಶ ಬರುವಂತೆ ಮಾಡಿದ್ದು, ಇದಕ್ಕಾಗಿ ಸಹಕರಿಸಿದ ಎಲ್ಲಾ ಸಹಪಾಠಿ ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿ ವರ್ಗದವರಿಗೂ ಕೃತಜ್ಞತೆಗಳನ್ನು ತಿಳಿಸಿದರು.


ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ ಹನುಮಂತಪ್ಪರವರು ಮಾತನಾಡುತ್ತಾ, ತಮ್ಮೊಂದಿಗೆ ಜೊತೆಗಾರರಾಗಿದ್ದ ವೆಂಕಟೇಶ್‌ರವರು ೩೧ ವರ್ಷಗಳ ತಮ್ಮ ಸೇವಾ ಅವಧಿಯಲ್ಲಿ ಕುಟುಂಬದ ಕಡೆ ಗಮನಹರಿಸದೆ, ಸಂಪೂರ್ಣ ಶಾಲೆಯ, ವಿದ್ಯಾರ್ಥಿಗಳ ಅಭಿವೃದ್ಧಿ ಕಡೆಗೆ ಗಮನಹರಿಸಿದ್ದರೆಂದು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಹನೀಫುಲ್ಲರವರು ವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ವಿ.ಎಮ್. ಕಿಶೋರ್ ಕುಮಾರ್ ಮತ್ತು ತಂಡದವರು ಪ್ರಾಂಶುಪಾಲ ವೆಂಕಟೇಶ್ ರವರನ್ನು ಅಭಿನಂದಿಸಿದರು. ಇವರೊಂದಿಗೆ ನೂರಾರು ಮಂದಿ ವೆಂಕಟೇಶ್ ಸಹಪಾಠಿಗಳು, ಸಿಬ್ಬಂದಿ ವರ್ಗದವರು ಹಾಗೂ ಅಭಿಮಾನಿಗಳು ಅವರನ್ನು ಹಾಗೂ ಅವರ ಪತ್ನಿ ವೆಂಕಟಲಕ್ಷ್ಮಮ್ಮ ರವರನ್ನು ಪೇಟಾ ತೊಡಿಸಿ ಶಾಲು ಹೊದಿಸಿ, ಅಭಿನಂದಿಸಿದರು.


ಶಾಲಾ ಅಭಿವೃದ್ಧಿ ಸಮಿತಿಯ ಪುರಸಭಾ ಸದಸ್ಯರಾದ ಎಂ ನಾರಾಯಣಸ್ವಾಮಿ, ಆನಂದಪ್ಪ, ವಿಮಲಾ ಬಸವರಾಜು, ದೇವರಾಜು, ಅಶ್ವತ್ಥಪ್ಪ, ಹಿರಿಯ ವಿದ್ಯಾರ್ಥಿಗಳ ಸಂಘದ ಖಜಾಂಚಿ ವಿಶ್ವನಾಥ್, ನಿರ್ದೇಶಕರಾದ ಬಸವರಾಜು, ಮುನಿಶಾಮಪ್ಪ, ಪದ್ಮರಾಜು, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲಲಿತಮ್ಮ, ಕ್ಲಸ್ಟರ್ ಅಧಿಕಾರಿಗಳು ತಾಲೂಕು ಹಾಗೂ ಜಿಲ್ಲಾ ಶಿಕ್ಷಣ ಇಲಾಖೆಯ ಸಿಬ್ಬಂದಿ ವರ್ಗದವರುಗಳು ಉಪಸ್ಥಿತರಿದ್ದರು.