ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಮಹನೀಯರ ಸ್ಮರಣೆ ಅಗತ್ಯ

ಅರಸೀಕೆರೆ, ನ. ೨೬- ಮನುಕುಲದ ಉದ್ದಾರಕ್ಕೆ ಶ್ರಮಿಸಿದ ಮಹನೀಯರು ಸ್ಮರಣೆ ಔಚಿತ್ಯ ಪೂರ್ಣವಾಗಿದೆ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದರು.
ನಗರದ ಹಳೆಯ ಮಾಧ್ಯಮಿಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಕನಕದಾಸರ ೫೩೮ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಬಡವ, ಬಲ್ಲಿದ ಎನ್ನುವ ಭೇದ ಮಾಡಬಾರದು ಎಂಬುದನ್ನು ಕನಕದಾಸರು ರಾಮಧಾನ್ಯ ಚರಿತೆ ಕೃತಿಯಲ್ಲಿ ಭತ್ತ ಮತ್ತು ರಾಗಿಯ ಸವಾಲಿನ ಮೂಲಕ ಪ್ರತಿಪಾದಿಸಿದ್ದಾರೆ. ೧೨ನೇ ಶತಮಾನದ ಬಸವಾದಿ ಶಿವಶರಣರು, ದಾಸ ಶ್ರೇಷ್ಠರು ಮಾನವ ಕಲ್ಯಾಣದ ಕುರಿತು ಸಂದೇಶ ನೀಡಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಬಡವರ ಪರ ಕೆಲಸ ಮಾಡುತ್ತಿದ್ದು, ಸಮಾಜದ ಉನ್ನತಿಗಾಗಿ ಬದುಕು ಮೀಸಲಿಟ್ಟ ಮಹನೀಯರನ್ನು ಸದಾ ಗೌರವಿಸೋಣ ಎಂದರು.


ಕಾಗಿನೆಲೆ ಕನಕ ಗುರುಪೀಠದ ಶ್ರೀ ಶಿವಾನಂದ ಪುರಿ ಸ್ವಾಮೀಜಿ ಮಾತನಾಡಿ, ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯ ಬಲ್ಲಿರಾ ಎಂದು ಕನಕದಾಸರು ಜಾತಿ ವ್ಯವಸ್ಥೆ ಖಂಡಿಸಿದರು. ಅಂತಹ ದಾರ್ಶನಿಕರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದರೆ ಬದುಕು ಹಸನಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರ ಪರ ಕೆಲಸ ಮಾಡಲು ಸಂಕಲ್ಪ ಮಾಡಿದ್ದು ಯಶಸ್ಸು ದೊರೆಯಲಿ ಎಂದರು.


ಕರ್ನಾಟಕ ಗೃಹಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಕನಕದಾಸರ ವಾಣಿಯಂತೆ ಎಲ್ಲ ಸಮುದಾಯದ ಜನರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದ ಮತದಾರರ ಆಶಿರ್ವಾದ ಬಲದಿಂದ ಗಂಡಸಿ, ಬಾಣಾವರ, ಕಣಕಟ್ಟೆ ಹಾಗೂ ಕಸಬಾ ಹೋಬಳಿ ಕೆರೆಗಳನ್ನು ತುಂಬಿಸಲು ಶಕ್ತಿ ಮೀರಿ ಹೋರಾಟ ಮಾಡುತ್ತಿದ್ದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅಸ್ತು ಎಂದಿದ್ದಾರೆ. ಹಾಗೆಯೇ ಐನೂರಕ್ಕು ಹೆಚ್ಚಿನ ಹಳ್ಳಿಗಳಿಗೆ ಕಾಂಕ್ರೀಟ್ ರಸ್ತೆ ಮಾಡಿಸಿ ಕ್ಷೇತ್ರವನ್ನು ಪ್ರಗತಿ ಪಥದತ್ತ ಕೊಂಡೂಯ್ಯುತ್ತಿದ್ದೇನೆ ಎಂದು ತಮ್ಮ ಕಾರ್ಯವೈಖರಿ ಸಮರ್ಥಿಸಿಕೊಂಡರು.


ಹಾಸನ ನಗಾರಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪಟೇಲ್ ಶಿವಪ್ಪ ಮಾತನಾಡಿ, ಹೊರಗೆ ಎಷ್ಟೇ ಉಜ್ಜಿ ಸ್ನಾನ ಮಾಡಿದರೂ ಒಳಗಿನ ಕೊಳೆ ದೂರಮಾಡಲು ಸಾಧ್ಯವಾಗದು. ಸಂತ ಶ್ರೇಷ್ಠ ಕನಕದಾಸರ ತತ್ವ, ಚಿಂತನೆ, ಆದರ್ಶ ಮೈಗೂಡಿಸಿಕೊಂಡು ಸಾಗಿದರೆ ಮಾತ್ರವೇ ತನು ಶುದ್ದಿ, ಮನಶುದ್ದಿ ಮಾಡಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್, ಜಿ.ಪಂ. ಮಾಜಿ ಸದಸ್ಯ ಬಿಳಿಚೌಡಯ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಣಾವರ ಶ್ರೀನಿವಾಸ್, ನಗರಸಭೆ ಮಾಜಿ ಅಧ್ಯಕ್ಷ ಸಮೀವುಲ್ಲಾ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ತೊಂಡಿಗನಹಳ್ಳಿ ಕೃಷ್ಣಮೂರ್ತಿ, ತಾಪಂ ಮಾಜಿ ಸದಸ್ಯ ಮಂಗಳಾಪುರ ನಾಗರಾಜ್, ಹರೀಶ್, ಕರವೇ ನಗರಾಧ್ಯಕ್ಷ ಸಂತೋಷ್, ಬಸವರಾಜ್ ಮತ್ತಿತರರು ಭಾಗವಹಿಸಿದ್ದರು.