ಫಾತಿಮಾ ಶೇಖ್‍ರ ಕೊಡುಗೆ ಪರಿಚಯಿಸುವುದು ಅಗತ್ಯ

ಕಲಬುರಗಿ:ಜ.10: ಅವರು ಭಾರತದ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿ ಮತ್ತು ಸಮಾಜ ಸುಧಾರಕಿ, ಸಾವಿತ್ರಿಬಾಯಿ ಫುಲೆ ಅವರೊಂದಿಗೆ 1848ರಲ್ಲಿ ದೇಶದ ಮೊದಲ ಬಾಲಕಿಯರ ಶಾಲೆಯನ್ನು ಸ್ಥಾಪಿಸಿದರು. ಶಿಕ್ಷಣದ ಮೂಲಕ ಜಾತಿ ಮತ್ತು ಲಿಂಗ ತಾರತಮ್ಯ ನಿವಾರಣೆಗೆ ಶ್ರಮಿಸಿದ್ದಾರೆ. ಹಿಂದುಳಿದ ವರ್ಗ ಮತ್ತು ಮಹಿಳೆಯರಿಗೆ ಶಿಕ್ಷಣ ಒದಗಿಸಿ ಭಾರತದಲ್ಲಿ ಮಹಿಳಾ ಶಿಕ್ಷಣಕ್ಕೆ ದಾರಿ ಮಾಡಿಕೊಟ್ಟರು. ಅವರ ಕೊಡುಗೆಗಳು ಭಾರತದ ಮಹಿಳಾ ಮತ್ತು ಶಿಕ್ಷಣ ಇತಿಹಾಸದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದು, ವ್ಯಾಪಕವಾಗಿ ಪರಿಚಯಿಸುವುದು ಅಗತ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿನ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಜರುಗಿದ ‘ದೇಶದ ಮೊದಲ ಮುಸ್ಲಿಂ ಶಿಕ್ಷಕಿ ಪಾತಿಮಾ ಶೇಖ್‍ರ 195ನೇ ಜನ್ಮದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.
ಜಾತಿ ಮತ್ತು ಸಾಮಾಜಿಕ ಅಸಮಾನತೆ ಹೋರಾಡಿದರು, ಸಮಾಜದ ಹಿಂದುಳಿದ ವರ್ಗದ ಮಹಿಳೆಯರು ಮತ್ತು ಮಕ್ಕಳಿಗೆ ಶಿಕ್ಷಣದ ಒದಗಿಸಲು ಶ್ರಮಿಸಿದರು. ವಿಧವಾ ವಿವಾಹ, ಸತಿ ಸಹಗಮನ ಪದ್ಧತಿ ವಿರೋಧ ಮತ್ತು ಮಹಿಳಾ ಸಬಲೀಕರಣದಂತಹ ವಿಷಯಗಳ ಬಗ್ಗೆ ಧ್ವನಿ ಎತ್ತಿದರು. ದಲಿತ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಸಮಾನತೆಯ ಸಂಬಂಧಗಳನ್ನು ಬೆಳೆಸುವ ಮೂಲಕ ಜಾತ್ಯತೀತ ತತ್ವಗಳನ್ನು ಕಾರ್ಯಗತಗೊಳಿಸಿದರು. 1848ರಲ್ಲಿ ಸಾವಿತ್ರಿಬಾಯಿ ಫುಲೆ ಅವರೊಂದಿಗೆ ಜೊತೆಗೂಡಿ ಬಾಲಕಿಯರಿಗಾಗಿ ಮೊದಲ ಶಾಲೆ ಪ್ರಾರಂಭಿಸಿದರು. ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಪೆÇೀಷಕರ ಮನವೊಲಿಸಲು ಮನೆ-ಮನೆಗೆ ತೆರಳಿ ಪ್ರೇರೇಪಿಸಿದರು ಎಂದರು.
ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ಫಾತಿಮಾ ಶೇಖ್‍ರ ಕಾರ್ಯವು ಭಾರತದಲ್ಲಿ ಮಹಿಳಾ ಶಿಕ್ಷಣದ ಇತಿಹಾಸಕ್ಕೆ ಅಡಿಪಾಯ ಹಾಕಿತು ಮತ್ತು ಇತರ ಮಹಿಳೆಯರಿಗೆ ಬೋಧನೆಗೆ ಪ್ರವೇಶಿಸಲು ದಾರಿ ಮಾಡಿಕೊಟ್ಟಿತು. ಭಾರತದ ಇತಿಹಾಸದಲ್ಲಿ ಅವರ ಕೊಡುಗೆ ಮರೆತುಹೊಗಿದೆ. ಆದರೆ ಅವರ ಹೋರಾಟ ಮತ್ತು ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿಯರಾದ ಮುಸ್ಕಾನ್ ಶೇಖ್, ರುಕ್ಸಾನಾ ಪಟೇಲ್, ಪೂಜಾ ಹೂಗಾರ, ಸ್ನೇಹಾ ಚೌಹಾಣ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.