
ಕಲಬುರಗಿ :ಫೆ.24: ವಿದ್ಯಾರ್ಥಿಗಳಲ್ಲಿ ನಿರಂತರ ಪ್ರಯತ್ನಶೀಲತೆ ಇರಲಿ. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ. ಶಾಲಾ-ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು ಜ್ಞಾನ ದೇಗುಲಗಳು. ವಿದ್ಯಾರ್ಥಿಗಳಿಗೆ ಜ್ಞಾನ, ಮೌಲ್ಯಗಳನ್ನು ಬಿತ್ತುವ ಕೇಂದ್ರಗಳು. ನೀವು ಕಲಿತ ಶಿಕ್ಷಣ ಸಂಸ್ಥೆಗಳತ್ತ ತಿರುಗಿ ನೋಡಿ. ನಮ್ಮ ಸಂಸ್ಥೆ ಎಂಬ ಅಭಿಮಾನದಿಂದ ಸಹಾಯ-ಸಹಕಾರ ಮಾಡಬೇಕು ಎಂದು ಪ್ರಾಚಾರ್ಯ ಯಶವಂತ ಗಾಣಿಗೇರ ಹೇಳಿದರು.
ಜೇವರ್ಗಿ ಪಟ್ಟಣದ ಕೋರ್ಟ್ ಎದುರುಗಡೆಯಿರುವ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾಲೇಜಿನ 19ನೇ ವಾರ್ಷಿಕೋತ್ಸವ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಉಪನ್ಯಾಸಕಿ ಶಾರದಾ ಆಲಗೂರಕರ್ ಮಾತನಾಡಿ, ಮನುಷ್ಯನ ಸಾಧನೆಗೆ ಅಸಾಧ್ಯವಾದದದ್ದು ಯಾವುದು ಇಲ್ಲ. ಸಾಧಿಸುವ ಛಲಗಾರಿಕೆ ಬೇಕು. ನಿರಂತರ ಅಧ್ಯಯನ, ಶಿಸ್ತು, ಬದ್ಧತೆ, ಸಮಯಪಾಲನೆ ಮೈಗೂಡಿಸಿಕೊಳ್ಳಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿಯೋಜಿತ ಉಪನ್ಯಾಸಕರಾದ ಎಚ್.ಬಿ.ಪಾಟೀಲ, ಉಸ್ಮಾನ್ ಖಾಜಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.



























