ಕೋಲಾರ,ನ.೨೬- ಶತಮಾನ ಕಳೆದರೂ ಲೈಂಗಿಕ ಅಲ್ಪಸಂಖ್ಯಾತರಿಗೆ ಸೂಕ್ತ ಸ್ಥಾನಮಾನ ನೀಡಲು ಸಾಧ್ಯವಾಗಿಲ್ಲ ಆದರೆ ಸಮಾನವಾಗಿ ಬದುಕಲು, ಲಿಂಗಧಾರಿತವಾಗಿ ಪಾಲ್ಗೊಳ್ಳಲು ಸಂವಿಧಾನದ ಹಕ್ಕುಗಳ ಮೂಲಕ ಆರ್ಥಿಕ ಸಬಲತೆ ಒದಗಿಸುವುದು ಅತಿ ಮುಖ್ಯ ಎಂದು ಕರ್ನಾಟಕ ಸರ್ಕಾರದ ಖಜಾನೆ ಇಲಾಖೆಯ ಹೆಚ್ಚುವರಿ ನಿರ್ದೇಶಕರಾದ ಡಾ ವಿ ಭಾಗ್ಯಲಕ್ಷ್ಮಿ ಅಭಿಪ್ರಾಯಪಟ್ಟರು.
ಕೋಲಾರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ವಿವಿಯ ತನ್ನ ಮಂಗಸಂದ್ರದ ಸುವರ್ಣಗಂಗೆ ಆವರಣದಲ್ಲಿ ಪಿಎಂ ಉಷಾ ಸಹಯೋಗದಲ್ಲಿ ಆಯೋಜಿಸಿದ್ದ ‘ಲಿಂಗಾಧಾರಿತ ಪಾಲ್ಗೊಳ್ಳುವಿಕೆ-ಸಮತೆಯತ್ತಾ ಹೆಜ್ಜೆ’ ಎಂಬ ವಿಷಯ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಲಿಂಗಧಾರಿತ ಪಾಲ್ಗೊಳ್ಳುವಿಕೆ ಎಂದರೆ ಪುರುಷರು, ಮಹಿಳೆಯರು, ಲೈಂಗಿಕ ಅಲ್ಪಸಂಖ್ಯಾತರು ಎಲ್ಲಾ ಹಂತಗಳಲ್ಲಿ ಸಮಾನವಾಗಿ ಪಾಲ್ಗೊಳ್ಳುವುದಾಗಿದೆ ಎಂದ ಅವರು, ಜಗತ್ತಿನಲ್ಲಿ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಇಂತಹ ಸೂಕ್ಷ್ಮ ವಿಷಯಗಳು ತುಂಬಾ ಮುಖ್ಯವಾಗುತ್ತವೆ. ವಿದೇಶಗಳಲ್ಲಾದರೆ ತೃತೀಯ ಲಿಂಗಿ ಮಕ್ಕಳು ಜೈವಿಕವಾಗಿಯೇ ಹುಟ್ಟುತ್ತಾರೆ ಅಲ್ಲಿನ ವ್ಯವಸ್ಥೆ ಅಂತಹ ಮಕ್ಕಳನ್ನು ಸಹಜವಾಗಿಯೇ ಸ್ವೀಕರಿಸುತ್ತದೆ ಮತ್ತು ಎಲ್ಲಾ ರಂಗಗಳಲ್ಲೂ ಅವರು ಪಾಲ್ಗೊಳ್ಳುವಂತೆ ನೋಡಿಕೊಳ್ಳುತ್ತದೆ ಎಂದರು.
ಆದರೆ ನಮ್ಮಲ್ಲಿ ಮಾತ್ರ ಶತಮಾನ ಕಳೆದರೂ ಲೈಂಗಿಕ ಅಲ್ಪಸಂಖ್ಯಾತರಿಗೆ ಸೂಕ್ತ ಸ್ಥಾನಮಾನ ನೀಡಲು ದಶಕಗಳೇ ಬೇಕಾಗುತ್ತವೆ. ಲಿಂಗಧಾರಿತ ಪಾಲ್ಗೊಳ್ಳುವಿಕೆ ಎಂದರೆ ಪುರುಷರು, ಮಹಿಳೆಯರು, ಲೈಂಗಿಕ ಅಲ್ಪಸಂಖ್ಯಾತರು ಎಲ್ಲಾ ಹಂತಗಳಲ್ಲಿ ಸಮಾನವಾಗಿ ಪಾಲ್ಗೊಳ್ಳುವುದಾಗಿದೆ. ಇಂತಹ ವಿಚಾರ ಸಂಕಿರಣಗಳು ಎಲ್ಲರ ಸಂಕಟಗಳನ್ನು ಅರಿವಿದ್ದವರ ಅರಿವು ಬೆಳಿಸಿಕೊಳ್ಳಬೇಕಾದವರ ಬಳಿ ಹೇಳಿಕೊಳ್ಳುವ ವೇದಿಕೆಯಾಗಿದೆ ಎಂದು ತಿಳಿಸಿದರು.
ಸಂವಿಧಾನದ ಹಕ್ಕುಗಳ ಮೂಲಕ ಸಮಾನವಾಗಿ ಬದುಕಬೇಕು ಲಿಂಗಧಾರಿತವಾಗಿ ಪಾಲ್ಗೊಳ್ಳಲು ಆರ್ಥಿಕ ಸಬಲತೆ ಮುಖ್ಯವಾಗುತ್ತದೆ, ಈ ಭದ್ರತೆ ಇದ್ದಾಗ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಆದ್ದರಿಂದ ಇಲ್ಲಿ ಪಾಲ್ಗೊಳ್ಳುವಿಕೆ ಎಂದರೆ ಆರ್ಥಿಕ ಭದ್ರತೆಯ ಪಡೆದುಕೊಳ್ಳುವುದೇ ಪ್ರಧಾನವಾಗಿರುತ್ತದೆ ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಲೋಕನಾಥ್ ಮಾತನಾಡಿ, ಸಮಾಜದ ಎಲ್ಲ ವರ್ಗದ ಜನರನ್ನು ಸಮಾನವಾಗಿ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು ಹಾಗೆ ಬೆಳೆಸಿಕೊಳ್ಳುವುದು ಇಂದಿನ ಅಗತ್ಯ, ಇದು ಸಾಧ್ಯವಿಲ್ಲದಿದ್ದರೆ ಲಿಂಗಾಧಾರಿತ ಪಾಲ್ಗೊಳ್ಳುವಿಕೆ ಸಾಧ್ಯವಾಗುವುದಿಲ್ಲ. ಸಂಕುಚಿತ ಮನೋಭಾವ ಪಾಲ್ಗೊಳ್ಳುವಿಕೆಯನ್ನು ನಿರಾಕರಿಸುತ್ತದೆ ಸಮತೆ ಸಮಾನತೆ ಬಗೆಗೆ ಯೋಚನೆ ನಮ್ಮ ಸಂಬಂಧಗಳು ಉತ್ತಮಗೊಳ್ಳಲು ಸಹಾಯಮಾಡುತ್ತದೆ ಎಂದು ಹೇಳಿದರು.
ಈ ವಿಚಾರ ಸಂಕಿರಣದಲ್ಲಿ ಸಮರೂಪ ಸಮರೂಪ ಭಾಷಣವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಮಾಡಿದರು. ಸಮರೂಪ ಸಮಾರಂಭದಲ್ಲಿ ಉತ್ತರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊಫೆಸರ್ ನಿರಂಜನ ವಾನಳ್ಳಿ ಅವರು ಉಪಸ್ಥಿತರಿದ್ದರು.
ಈ ವಿಚಾರ ಸಂಕಿರಣದಲ್ಲಿ ರಾಜ್ಯದ ಪ್ರಮುಖ ಸಾಹಿತಿಗಳು ಸಾಮಾಜಿಕ ಹೋರಾಟಗಾರರು ಲೈಂಗಿಕ ಅಲ್ಪಸಂಖ್ಯಾತ ಸಮುದಾಯ ಹಕ್ಕುಗಳ ಹೋರಾಟದ ಪ್ರಮುಖರು ಭಾಗವಹಿಸಿ ಗಮನ ಸೆಳೆದರು.
ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಿಎಂ ಉಷಾ ಸೆಲ್ ನೋಡಲ್ ಅಧಿಕಾರಿ ಡಾ. ರಮೇಶ್ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಸಂಯೋಜಕ ಡಾ. ಶ್ರೀನಿವಾಸ್ ಎಸ್.ಜಿ ಪ್ರಾಸ್ತಾವಿಕ ಮಾತುಗಳಾಡಿದರು. ಅಧ್ಯಾಪಕರುಗಳಾದ ಡಾ. ಗಾಯತ್ರಿ ದೇವಿ, ಡಾ. ಶ್ರೀನಿವಾಸ್ ಎನ್ ಗೋಷ್ಠಿಗಳನ್ನು ನಡೆಸಿಕೊಟ್ಟರು.




























