
ಯಾದಗಿರಿ:ಮಾ.೧:ಮುಂದಿನ ಚುನಾವಣೆಯಲ್ಲಿ ತಾನೇ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ರೀತಿಯಲ್ಲಿ ಹೇಳಿಕೆ ನೀಡುತ್ತಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ ಮಾತುಗಳು ರಾಜಕೀಯ ವಾಸ್ತವತೆಯಿಂದ ದೂರವಾಗಿವೆ ಎಂದು ಕೆಪಿಸಿಸಿ ಮುಖಂಡ ರಾಜ ಮೈನುದ್ದಿನ್ ಎಂ. ಜಮಾದಾರ ದೋರನಳ್ಳಿ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಸ್ಥಾನವು ವ್ಯಕ್ತಿಗತ ಘೋಷಣೆಯಿಂದ ಸಿಗುವುದಿಲ್ಲ. ಪಕ್ಷದ ಒಗ್ಗಟ್ಟು, ಜನಮೆಚ್ಚುಗೆ, ಶಾಸಕರ ಬೆಂಬಲ ಹಾಗೂ ಜನರ ವಿಶ್ವಾಸ ಮುಖ್ಯ ಅಂಶಗಳು. ಇವುಗಳಿಲ್ಲದೆ ಕೇವಲ ಹೇಳಿಕೆಗಳ ಮೂಲಕ ನಾಯಕತ್ವ ಸ್ಥಾಪಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ರಾಜ್ಯ ರಾಜಕೀಯದಲ್ಲಿ ಗಂಭೀರ ಸವಾಲುಗಳು ಎದುರಿರುವ ಸಂದರ್ಭದಲ್ಲಿ ಜನಸಮಸ್ಯೆಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು ವೈಯಕ್ತಿಕ ಆಸೆಗಳನ್ನು ಮುಂದಿರಿಸುವುದು ಸರಿಯಲ್ಲ. ಜನರು ಬೆಲೆ ಏರಿಕೆ, ನಿರುದ್ಯೋಗ, ಅಭಿವೃದ್ಧಿ ವಿಷಯಗಳಲ್ಲಿ ಸ್ಪಷ್ಟ ಉತ್ತರಗಳನ್ನು ನಿರೀಕ್ಷಿಸುತ್ತಿದ್ದಾರೆ. ಆದರೆ ಕೆಲವರು ವೈಯಕ್ತಿಕ ಪ್ರಚಾರಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ವಿಷಾದನೀಯ ಎಂದು ಅಭಿಪ್ರಾಯಪಟ್ಟರು.
ಇನ್ನೊಂದೆಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ವಿವಿಧ ಜನಪರ ಯೋಜನೆಗಳನ್ನು ಜಾರಿಗೆ ತಂದು ಕಾರ್ಯನಿರ್ವಹಿಸುತ್ತಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೇರಿದಂತೆ ಸಚಿವ ಸಂಪುಟ ರಾಜ್ಯದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ರಾಜಕೀಯದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಗಳಿಗಿಂತ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವುದು ಮುಖ್ಯ. ಅತಿರೇಕದ ಹೇಳಿಕೆಗಳಿಂದ ರಾಜಕೀಯ ಗಂಭೀರತೆ ಕುಸಿಯುತ್ತದೆ. ಆದ್ದರಿಂದ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಜಮಾದಾರ ಸಲಹೆ ನೀಡಿದರು.



























