
ಕೋಲಾರ,ಫೆ,೨೩- ನಾವು ತಂತ್ರಜ್ಞಾನಕ್ಕೆ ಶರಣಾಗದೆ ಬದುಕಿನ ನೈತಿಕ ಪಾಠ ಕಲಿಯುವ ಪ್ರಯತ್ನ ಮಾಡಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ತಿಳಿಸಿದರು.
ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ, ನವೀಕೃತ ಪ್ರಯೋಗಾಲಯಗಳ ಹಾಗೂ ಕಾಲೇಜು ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನದಲ್ಲಿ ಮುಂದುವರೆದಿದ್ದರೂ ಜಾತಿ ವ್ಯವಸ್ಥೆ, ಮೂಢನಂಬಿಕೆ, ಕಂದಾಚಾರ, ಬಡವ-ಶ್ರೀಮಂತ ಎಂಬ ಭೇದ ಭಾವ ಎಲ್ಲವೂ ಇದೆ. ಆದ್ದರಿಂದ ಬದುಕಿನಲ್ಲಿ ವೈಜ್ಞಾನಿಕತೆ, ಬಾಂಧವ್ಯ, ನೈತಿಕತೆ ಅಳವಡಿಸಿಕೊಳ್ಳುವುದು ಅನಿವಾರ್ಯ ವಾಗಿದೆ ಎಂದು ಹೇಳಿದರು.
ಪೋಷಕರು ೪ ಗೋಡೆಯಲ್ಲಿ ಮಕ್ಕಳನ್ನು ಕಟ್ಟಿಯಾಕದೆ, ಜೀವನವನ್ನು ಯಾವ ರೀತಿ ಎದುರಿಸಬೇಕು ಎನ್ನುವ ಪಾಠವನ್ನು ಸರಿಯಾಗಿ ಹೇಳಿಕೊಡಬೇಕು. ಪರೀಕ್ಷೆಯಲ್ಲಿ ಅಂಕ ಪಡೆಯುವುದು ಮುಖ್ಯವಲ್ಲ, ಜೀವನವನ್ನು ಯಾವ ರೀತಿ ಕಟ್ಟಿಕೊಳ್ಳುತ್ತೇವೆ ಎಂಬ ಅಂಕ ತೆಗೆದುಕೊಳ್ಳುವುದು ಮುಖ್ಯವೆಂದರು.
ನನ್ನ ಬದುಕು ರೂಪಿಸಿದ, ಜೀವನದ ಪಾಠ ಕಲಿಸಿದ, ಅಕ್ಷರ ದೀಕ್ಷೆ ಕೊಟ್ಟ ಶಾಲೆಗೆ ಏನಾದರೂ ಕೊಡುಗೆ ನೀಡಬೇಕೆಂದು, ನಾನು ಓದಿದ ಶಾಲೆ ಅಭಿವೃದ್ಧಿಗೆ ಅನುದಾನ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಹಠಮಾಡಿ ಪಡೆದು ಬಂದು ಇಂದು ಉದ್ಘಾಟಿಸುತ್ತಿರುವುದು ನನಗೆ ಧನ್ಯತಭಾವ ಮೂಡಿಸಿದೆ ಎಂದು ಭಾವಪರವಶರಾದರು.
ನಾವು ಎಷ ಎತ್ತರಕ್ಕೆ ಬೆಳೆದರೂ, ನಮ್ಮ ಬೇರುಗಳಾದ ತಂದೆ ತಾಯಿ, ಗುರುಗಳು ಹಾಗೂ ಶಾಲೆಯನ್ನು ಎಂದೂ ಮರೆಯಬಾರದು. ಈ ಶಾಲೆಯಲ್ಲಿ ಓದಿದವರು ಒಳ್ಳೆಯ ಹುದ್ದೆ ಹಾಗೂ ಘನತೆಗಳಲ್ಲಿ ಇದ್ದಾರೆ. ಅವರೆಲ್ಲರೂ ಶಾಲೆಯ ಬಗ್ಗೆ ಮಮತೆಯನ್ನು ಕಾಪಾಡಿಕೊಳ್ಳವ ಮೂಲಕ ಅತ್ಯುತ್ತಮ ಶೈಕ್ಷಣಿಕ ಕಲಿಕೆಯ ವಾತಾವರಣ ನಿರ್ಮಿಸಲು ಸಹಾಯ ಹಸ್ತ ಚಾಚಬೇಕು ಎಂದು ಮನವಿ ಮಾಡಿದರು.
ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಕೊಹಿನೂರ್ ಡೈಮಂಡ್ ಅನ್ನು ಬ್ರಿಟಿಷರು ಕದ್ದುಕೊಂಡು ಹೋಗಿದ್ದಾರೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ೧೩೦ ವಷ ಇತಿಹಾಸ ಹೊಂದಿರುವ ಈ ಶಾಲೆಯೇ ನಮ್ಮ ಕೊಹಿನೂರ್ ಡೈಮಂಡ್. ಇದನ್ನು ಪ್ರತಿಯೊಬ್ಬರೂ ಉಳಿಸಿ ಅಭಿವೃದ್ಧಿ ಪಡಿಸಲು ಮುಂದಾಗಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಮೊಬೈಲ್ ವ್ಯಸನಿಗಳಾಗದೆ ಪಾಠದ ಕಡೆ ಗಮನ ನೀಡುವ ಮೂಲಕ, ನಿಮ್ಮ ಭವಿಷವನ್ನು ಕಟ್ಟಿಕೊಳ್ಳಬೇಕು. ಈ ಶಾಲೆಯಲ್ಲಿ ಓದಿದವರು ಇಡೀ ಜಗತ್ತಿನ ಎಲ್ಲಾ ಕ್ಷೇತ್ರಗಳಲ್ಲಿಯೂ ಅತ್ಯುತ್ತಮ ಹುದ್ದೆಗಳನ್ನು ಅಲಂಕರಿಸಿ ಶಾಲೆಯ ಗೌರವವನ್ನು ಕಾಪಾಡುತ್ತಿದ್ದಾರೆ. ಪೋಷಕರು ಇದನ್ನು ಅರಿತು ಖಾಸಗಿ ಶಾಲೆಗಳಿಗೆ ಕಳಿಸದೆ ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪರಶುರಾಮ್ ಎನ್ ಉಂಕಿ ಪ್ರಾಸ್ತವಿಕವಾಗಿ ಮಾತನಾಡಿ, ಕಾಲೇಜು ಸಭಾಂಗಣ ಹಾಗೂ ನೂತನ ಕಟ್ಟಡ ನಿಮಾರ್ಣ ಮತ್ತು ಹಳೆಯ ಕಟ್ಟಡ ದುರಸ್ತಿಗಾಗಿ ಸರ್ಕಾರದಿಂದ ೧.೬೫ ಕೋಟಿ ರೂಪಾಯಿಗಳು ಅನುದಾನ ಮಂಜೂರಾಗಲು ಸಹಕಾರ ನೀಡಿದ ಈ ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ರವರಿಗೆ ಹಾಗೂ ಅದ್ವಿಕ್ ಕಂಪನಿಯು ಸಿಎಸ್‌ಆರ್ ನಿಧಿಯಲ್ಲಿ ನವೀಕೃತ ಪ್ರಯೋಗಾಲಯ ನಿರ್ಮಾಣಮಾಡಲು ಸಹಕರಿಸಿದ್ದು ಅವರಿಗೂ ಧನ್ಯವಾದಗಳನ್ನು ತಿಳಿಸಿದರು.
ದ್ವಿತೀಯ ಪಿಯುಸಿ ಪೂರ್ವ ಸಿದ್ದತಾ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾಲೇಜು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ವಸತಿ ಸಚಿವ ಜಮೀರ್ ಅಹಮದ್ ಮಾಧ್ಯಮ ಸಲಹೆಗಾರ ಲಕ್ಷ್ಮಿನಾರಾಯಣ, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ವಿ.ಮುನಿರಾಜು, ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರರಾದ ರಾಮಮೂರ್ತಿ, ಜಗದೀಶ ಆರ್.ಜಿ. ಅದ್ವಿಕ್ ಕಂಪನಿಯ ಮುಖ್ಯಸ್ಥರಾದ ಮಚಿಂದ್ರ ಘೋರ್ಪಡೆ, ನಿತಿನ್ ಕಂಕ್, ಸನ್ನಿ, ಪಂಕಜ್, ಮನಷ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಕೆ.ಎನ್.ಚಂದ್ರಶೇಖರ್, ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲೆ ಬಿ.ಎಂ.ರಾಧಮ್ಮ, ಉಪನ್ಯಾಸಕರಾದ ಪಾರ್ವತಮ್ಮ.ಎನ್ ರುಕ್ಮಣಿ, ಪದ್ಮ, ಆನಂದ್ ಕುಮಾರ್, ಲತಾ, ಶ್ರೀನಾಥ್, ಗೋವಿಂದ, ಶಾಹೀರಾ ಭಾನು, ತಜಮುಲ್ ಅಹಮದ್, ಭಾರತಿ, ನೇತ್ರಾವತಿ, ಕೆಂಪೇಗೌಡ, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



























