ಸಾಧಕರ ಸಹವಾಸ ಇದ್ದರೆ ಸಾಧನೆ ಮಾಡುವುದು ಸುಲಭ ಸಾಧ್ಯ

ಕಲಬುರಗಿ:ನ.27:ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರ ಸಹವಾಸ ಇದ್ದರೆ ಸಾಧನೆ ಮಾಡುವುದು ಸುಲಭ ಸಾಧ್ಯ ಎಂದು ಗುರೂಜಿ ಪದವಿ ಮಹಾವಿದ್ಯಾಲಯದ ಅಧ್ಯಕ್ಷರಾದ ಕಲ್ಯಾಣಕುಮಾರ ಶೀಲವಂತ ಅವರು ಹೇಳಿದರು. ನಗರದ ಸರಕಾರಿ ಪದವಿ ಪೂರ್ವ(ಎಂ.ಪಿ.ಎಚ್.ಎಸ್) ಕಾಲೇಜಿನಲ್ಲಿ ಸರ್ವೋದಯ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಓದುವದಕ್ಕೆ ಮನಸು ಮುಖ್ಯವೇ ಹೊರತು ವಯಸು ಮುಖ್ಯವಲ್ಲ ಎಂದರು. ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ. ಆದರ್ಶವಿಲ್ಲದೆ ಬದುಕಿದರೆ ಬದುಕಿಗೆ ಅವಮಾನ ಎಂದು ಹೇಳಿದರು. ಹೀಗಾಗಿ ಜೀವನದಲ್ಲಿ ಉನ್ನತವಾದ ಮತ್ತು ಉದಾತ್ತವಾದ ಸಾಧನೆ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯರಾದ ಶ್ರೀ ಸುರೇಶ ಬಡಿಗೇರ ಅವರು ಮಾತನಾಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ಸಿಕ್ಕಾಗ ಮಾತ್ರ ಸಂವಿಧಾನದ ಕನಸು ನನಸು ಆಗುತ್ತದೆ. ಸಂವಿಧಾನದಲ್ಲಿ ಯಾವುದೇ ಲೋಪದೋಷಗಳಿಲ್ಲ. ಆದರೆ ಸಂವಿಧಾನದ ಆಶಯಗಳು ಅನುಷ್ಠಾನಗೊಳಿಸುವಲ್ಲಿ ಪ್ರಭುತ್ವ ಸಂಪೂರ್ಣವಾಗಿ ಸೋತಿದೆ ಅಂದರು.ಅದೇ ರೀತಿಯಾಗಿ ಡಾ.ಬಿ.ಆರ್.ಅಂಬೇಡ್ಕರ್ ಪದವಿ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಡಾ.ಬಸವರಾಜ ಕುಮ್ನೂರ ಅವರು ಮಾತನಾಡಿ ದೇಶದ ಅಭಿವೃದ್ಧಿಗೆ ಹೊಸ ದಿಕ್ಕು ಮತ್ತು ದಿಸೆಗಳನ್ನು ನಿರ್ಧರಿಸುವಲ್ಲಿ ಸಂವಿಧಾನವು ನಿರ್ಣಾಯಕ ಪಾತ್ರ ನಿರ್ವಹಿಸುತ್ತದೆ ಎಂದರು.
ಜನರಿಗೆ ರಾಜಕೀಯ ಸಮಾನತೆ ಸಿಕ್ಕಿದೆಯೇ ವಿನಾಃ ಆರ್ಥಿಕ ಸಮಾನತೆ ಸಿಕ್ಕಿಲ್ಲ. ಆರ್ಥಿಕ ಸಮಾನತೆ ಇಲ್ಲದ ರಾಜಕೀಯ ಸಮಾನತೆ ನಿರರ್ಥಕ ಮತ್ತು ನಿಸ್ಪ್ರಯೋಜಕ ಎಂದರು. ಪ್ರಭುತ್ವವು ಸಂವಿಧಾನದ ಆಶಯಗಳ ಅನುಷ್ಠನಕ್ಕಾಗಿ ಹಗಲಿರಳು ಶ್ರಮಿಸಬೇಕೆಂದರು.ಅಂದಾಗ ಮಾತ್ರ ಸಮಾಜದ ಅಂಚಿನಲ್ಲಿರುವ ಮತ್ತು ವಂಚನೆಗೊಳಗಾಗಿರುವ ಜನರಿಗೆ ನ್ಯಾಯ ಸಿಗಲು ಸಾಧ್ಯ. ಸಂವಿಧಾನದ ಆಶಯಗಳಾದ ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ನ್ಯಾಯ ಜನರಿಗೆ ಸಿಕ್ಕಾಗ ಸಾಮಾನತೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯವೆಂದು ಮಾರ್ಮಿಕವಾಗಿ ಮಾತನಾಡಿದರು. ಟ್ರಸ್ಟ್‍ನ ಸಂಸ್ಥಾಪಕ ಅಧ್ಯಕ್ಷರಾದ ಡಾ.ಸಂಗೀತಾ ಸೈದಾಪೂರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಹೈದ್ರಾಬಾದ ಕರ್ನಾಟಕ ಸರಕಾರಿ ಕಾಲೇಜಿನ ವಿಭಾಗೀಯ ಅಧ್ಯಕ್ಷರಾದ ಡಾ.ಶರಣಪ್ಪ ಸೈದಾಪೂರ, ಟ್ರಸ್ಟ್‍ನ ಕಾರ್ಯದರ್ಶಿಯಾದ ಶ್ರೀ ರಾಜು ದೋಟಿಕೊಳ ಮತ್ತು ಶ್ರೀಮತಿ ನೀಲಾಂಬಿಕ ಪಾಟೀಲ್ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.ಸರಕಾರಿ ಪದವಿ ಪೂರ್ವ ಕಾಲೇಜಿನ ಗ್ರಂಥಪಾಲಕರಾದ ಎಚ್.ಎಸ್. ಬೇನಾಳ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲೇಜಿನ ಪ್ರಾಚಾರ್ಯರಾದ ದೇವಿದಾಸ ಪವಾರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ರಾಜ್ಯಶಾಸ್ತ್ರದ ಉಪನ್ಯಾಸಕರಾದ ಸಂತೋಷ ಹೊಸ್ಮನಿ ಅವರು ವಂದಿಸಿದರು. ಇದೇ ಸಂದರ್ಭದಲ್ಲಿ ಸಂವಿಧಾನದ ಪೀಠಿಕೆಯನ್ನು ವಾಚಿಸುವುದರೊಂದಿಗೆ ಅವುಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದರು.