
ಬೆಂಗಳೂರು, ಜ. ೧೫- ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ವಿಚಾರ ಬೂದಿ ಮುಚ್ಚಿದ ಕೆಂಡದಂತಿರುವಾಗಲೇ ದಲಿತ ಸಿಎಂ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದು, ದಲಿತರೊಬ್ಬರು ಸಿಎಂ ಆಗದಿರುವ ಬಗ್ಗೆ ನಮಗೆ ನೋವಿದೆ. ಹೈಕಮಾಂಡ್ ಮನಸ್ಸು ಮಾಡಿದರೆ ಎಲ್ಲವೂ ಆಗುತ್ತದೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಮನಸ್ಸು ಮಾಡಿದರೆ ಎಲ್ಲವೂ ಆಗುತ್ತದೆ. ಹೈಕಮಾಂಡ್‌ಗೆ ಯಾವ ಕಾಲದಲ್ಲಿ ಏನು ತೀರ್ಮಾನ ಮಾಡಬೇಕು ಎಂಬುದು ಗೊತ್ತಿದೆ. ಈಗ ತೀರ್ಮಾನ ಮಾಡುವ ಸ್ಥಾನದಲ್ಲಿ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆಯವರೇ ಕುಳಿತಿದ್ದಾರೆ. ನಾವು ಇನ್ನೇನು ಮಾತನಾಡುವುದು ಎಂದರು.
ರಾಜ್ಯದಲ್ಲಿ ಶೇ. ೨೫ ರಷ್ಟು ಪರಿಶಿಷ್ಟ ಜಾತಿ ಸಮುದಾಯದವರಿದ್ದಾರೆ. ಇವರಲ್ಲಿ ಶೇ. ೭೫ ರಷ್ಟು ಮಂದಿ ಕಾಂಗ್ರೆಸ್‌ಗೆ ಮತ ಹಾಕುತ್ತಾರೆ. ಇವೆಲ್ಲವನ್ನೂ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ದಲಿತರು ಇದುವರೆಗೂ ಸಿಎಂ ಆಗದಿರುವ ಬಗ್ಗೆ ನಮಗೂ ನೋವಿದೆ ಎಂದು ಹೇಳಿದರು.
ನಾನು ಮುಖ್ಯಮಂತ್ರಿ ಪರನೂ ಇಲ್ಲ, ವಿರೋಧನೂ ಇಲ್ಲ. ಹಾಗೆಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರನೂ ಇಲ್ಲ, ವಿರೋಧನೂ ಇಲ್ಲ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒಳ್ಳೆಯ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಇತಿಹಾಸ ಸೃಷ್ಠಿ ಮಾಡಿದ್ದಾರೆ ಎಂದರು.
ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್‌ಗಾಂಧಿಯಲರು ಮೊನ್ನೆ ಮೈಸೂರಿನಲ್ಲಿ ಸಿಎಂ ಮತ್ತು ಡಿಸಿಎಂ ಇಬ್ಬರನ್ನೂ ಕರೆದು ಮಾತನಾಡಿದ್ದಾರೆ. ದೆಹಲಿಗೆ ಹೋಗುವುದು ಇವರಿಬ್ಬರಿಗೆ ಬಿಟ್ಟ ವಿಚಾರ. ಹೈಕಮಾಂಡ್ ಕರೆದು ಮಾತನಾಡುತ್ತೆ. ಎಲ್ಲವೂ ಇತ್ಯರ್ಥವಾಗಲಿದೆ ಎಂದರು.
ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ ಪೌರಾಯುಕ್ತೆಗೆ ಬೆದರಿಕೆ ಹಾಕಿರುವ ಬಗ್ಗೆ ಆತನನ್ನು ಕರೆದು ಬುದ್ಧಿ ಹೇಳುತ್ತೇನೆ. ರಾಜಕೀಯದಲ್ಲಿರುವವರು ಶಾಂತ ಸ್ವಭಾವದಿಂದ ಇರಬೇಕು. ಹೀಗೆಲ್ಲಾ ಮಾತನಾಡಬಾರದು. ರಾಜೀವ್‌ಗೌಡ ಸೌಮ್ಯ ಸ್ವಭಾವದವರೇ. ಏಕೆ ಈ ರೀತಿ ಮಾತನಾಡಿದರು ಎಂದು ಗೊತ್ತಿಲ್ಲ. ಅವರನ್ನು ಕರೆದು ಅವರಿಗೆ ಬುದ್ಧಿ ಮಾತು ಹೇಳುತ್ತೇನೆ ಎಂದು ಅವರು ಹೇಳಿದರು.

























