
ಕಲಬುರಗಿ, ಜು. ೪- ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮೂರು ಅಂಕಿಗಳ ಬಹುಮತ ದೊರೆತು ಸರಕಾರ ಅಧಿಕಾರಕ್ಕೆ ಬಂದರೆ ಮೊದಲು ಆರ್.ಎಸ್.ಎಸ್ ಕಚೇರಿ ಮೇಲೆ ಐ.ಟಿ ಮತ್ತು ಇ.ಡಿ ದಾಳಿ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ನುಡಿದರು.
ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್.ಎಸ್.ಎಸ್.ನವರಿಗೆ ರೂ.೩೦೦ ಕೋಟಿ, ೪೦೦ ಕೋಟಿ ಎಲ್ಲಿಂದ ಬರುತ್ತಿದೆ ಎಂಬುದು ನನಗೆ ಗೊತ್ತಿದೆ. ಹಾಗಾಗಿ, ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮೊದಲು ಆರ್.ಎಸ್.ಎಸ್ ಕಚೇರಿ ಮೇಲೆ ಐ.ಟಿ ಮತ್ತು ಇ.ಡಿ ದಾಳಿ ನಡೆಸುವುದು ಖಚಿತ ಎಂದರು.
‘ಬಿಜೆಪಿ ಮುಖಂಡರು ಆರ್.ಎಸ್.ಎಸ್ ಚೇಲಾಗಳು ಎಂದು ಕರೆಯುವುದಕ್ಕೆ ನನಗೇನೂ ಹೆದರಿಕೆಯಿಲ್ಲ ಎಂದ ಅವರು, ನಾನು ಆರ್.ಎಸ್.ಎಸ್ ಮೇಲೆ ನಿಷೇಧ ಹೇರುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಬದಲಿಗೆ, ಮೂರು ಸಲ ಆರ್.ಎಸ್.ಎಸ್ ನಿಷೇಧಗೊಂಡಿತ್ತು. ಆ ನಿಷೇಧ ಹಿಂಪಡೆದು ತಪ್ಪು ಮಾಡಿದ್ದೇವೆ ಎಂದಷ್ಟೇ ಹೇಳಿದ್ದೇನೆ’ ಎಂದರು.
ಒಂದುವೇಳೆ, ನಾವು ಅಧಿಕಾರಕ್ಕೆ ಬಂದರೆ ಆರ್.ಎಸ್.ಎಸ್. ನಿಷೇಧ ಮಾಡಲಾಗುವುದು. ಅಲ್ಲಿಯವರೆಗೆ ಅವರಿಗೆ ಜೇಲಿಗೆ ಹೋಗೋಕೆ ಅಷ್ಟೊಂದು ಆತುರವಾದರೂ ಏಕೆ ಎಂದು ಪ್ರಶ್ನಿಸಿದರು.
ಆರ್.ಎಸ್.ಎಸ್ ಮೇಲೆ ನಿಷೇಧ ಹೇರಲು ಬಿಜೆಪಿಯವರು ೧೦ ಕಾರಣ ಕೇಳುತ್ತಾರೆ. ಆದರೆ, ಕಳೆದ ೧೦೦ ವರ್ಷಗಳಲ್ಲಿ ಆರ್. ಎಸ್.ಎಸ್ ದೇಶದ ಸಬಲೀಕರಣಕ್ಕಾಗಿ ಮಾಡಿದ ೧೦ ಒಳ್ಳೆಯ ಕೆಲಸಗಳ ಕುರಿತು ಮಾಹಿತಿ ನೀಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.
ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಕುರಿತು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ರವಿಕುಮಾರ್ ಮೂಲತಃ ಬಿಜೆಪಿಯವರು ಅಲ್ಲ. ಅವರು ಆರ್.ಎಸ್.ಎಸ್ ಶಾಖೆಯಿಂದ ಬಂದವರು. ಅಲ್ಲಿ ಮನುಸ್ಮೃತಿ ಮನಸ್ಥಿತಿಯಿದೆ. ಹೀಗಾಗಿ, ಅವರ ಬಾಯಲ್ಲಿ ಹೀಗೆಲ್ಲಾ ಮಾತುಗಳು ಬರುತ್ತವೆ ಎಂದು ವ್ಯಾಖ್ಯಾನಿಸಿದರು.
ರವಿಕುಮಾರ್ ಅವರಿಗೆ ಮುಂಚೆಯಿಂದಲೂ ಬಾಯಿ ಚಪಲ ಜಾಸ್ತಿ. ಕಲಬುರಗಿಗೆ ಬಂದು ಜಿಲ್ಲಾಧಿಕಾರಿಗಳ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದರು. ಇದನ್ನು ಖಂಡಿಸಿ ಕೋರ್ಟ್ ಛೀಮಾರಿ ಹಾಕಿದ್ದಲ್ಲದೆ, ಜಿಲ್ಲಾಧಿಕಾರಿಗಳ ಕ್ಷಮೆ ಕೇಳುವಂತೆ ತಾಕೀತು ಮಾಡಿತ್ತು. ಆದರೆ, ಈವರೆಗೆ ರವಿಕುಮಾರ್ ಕ್ಷಮೆ ಕೇಳಿಲ್ಲ. ಇದನ್ನು ನೋಡಿದರೆ ರವಿಕುಮಾರ್ ಅವರದ್ದು ಎಂತಹ ಕೊಳಕು ಮನಸ್ಸು ಎಂಬುದು ಅರ್ಥವಾಗುತ್ತದೆ ಎಂದರು.
ಹಾಗೆ ನೋಡಿದರೆ, ರವಿಕುಮಾರ್ ನಿಮ್ಹಾನ್ಸ್ ನಲ್ಲಿ ಇರಬೇಕಾದವರು ಎಂದ ಪ್ರಿಯಾಂಕ್, ಅಶ್ಲೀಲವಾಗಿ ಮಾತನಾಡಿರುವುದು ಸಾಬೀತಾದರೆ ನೇಣು ಹಾಕಿಕೊಳ್ಳುವುದಾಗಿ ರವಿಕುಮಾರ್ ಹೇಳಿದ್ದಾರೆ. ಹಾಗಾದರೆ ಅವರಿಗೆ ನೇಣು ಹಾಕಿಕೊಳ್ಳಲು ಹಗ್ಗ ಕೊಡಿ ಎಂದು ವಾಗ್ದಾಳಿ ನಡೆಸಿದರು.
ರವಿಕುಮಾರ್ ಏನೆಲ್ಲಾ ಮಾತನಾಡಿದ್ದಾರೆ ಎಂಬುದಕ್ಕೆ ಎಲ್ಲ ಸಾಕ್ಷಿ ವಿಡಿಯೋದಲ್ಲಿದೆ. ಇದಕ್ಕಿಂತಲೂ ಹೆಚ್ಚಿನ ಸಾಕ್ಷಿ ಎಲ್ಲಿಂದ ತರಬೇಕು ಎಂದು ಪ್ರಶ್ನಿಸಿದರಲ್ಲದೆ, ಅವರಿಗೆ ನಾಚಿಕೆ ಆಗಬೇಕು. ಇಷ್ಟೆಲ್ಲಾ ಆದಾಗ್ಯೂ ಅವರು ತಮ್ಮ ಹೇಳಿಕೆ ಬಗ್ಗೆ ಸಮರ್ಥನೆ ಮಾಡಿಕೊಳ್ಳುತ್ತಾರೆ ಎಂದು ಅಚ್ಚರಿ ವ್ಯಕ್ತಪಡಿಸಿದರು.
ಆರ್.ಎಸ್.ಎಸ್ ದೇಶವಿರೋಧಿ ಸಂಘಟನೆ
ಆರ್.ಎಸ್.ಎಸ್ ಒಂದು ದೇಶ ವಿರೋಧಿ ಸಂಘಟನೆ ಎಂದು ಸ್ವತಃ ಅಂಬೇಡ್ಕರ್ ಅವರೇ ಹೇಳಿದ್ದರು. ಈಗಲೂ ಈ ಸಂಘಟನೆ ದೇಶದಲ್ಲಿ ಕೋಮು ಬೀಜ ಬಿತ್ತುವ ಕೆಲಸ ಮಾಡುತ್ತಿದೆ. ‘ಒಂದು ಧರ್ಮ ಒಂದು ದೇಶ’ ಎನ್ನುತ್ತಿದ್ದಾರೆ. ಹಾಗೇನಾದರೂ ಆಗುವುದಿದ್ದರೆ ಮನುಸ್ಮೃತಿ ಎಂಬುದು ಆರ್.ಎಸ್.ಎಸ್ ಮತ್ತು ಬಿಜೆಪಿ ಮುಖಂಡರು ಮನೆಗಳಲ್ಲಿ ಜಾರಿಗೆ ಆಗಲಿ ಎಂದರು.