Home ಜಿಲ್ಲೆ ಬೆಂಗಳೂರು ಅರಳಿ ಮರದ ರೆಂಬೆ ಕಟಾವು ವಿಚಾರ: ಮಾರಿಕುಪ್ಪಂ ಗ್ರಾಮದಲ್ಲಿ ಜಟಾಪಟಿ

ಅರಳಿ ಮರದ ರೆಂಬೆ ಕಟಾವು ವಿಚಾರ: ಮಾರಿಕುಪ್ಪಂ ಗ್ರಾಮದಲ್ಲಿ ಜಟಾಪಟಿ

oplus_0

ಕೆಜಿಎಫ್, ಅ. ೬: ಮಾರಿಕುಪ್ಪಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಿಕುಪ್ಪಂ ಗ್ರಾಮದ ಓಂ ಶಕ್ತಿ ಮತ್ತು ವೀರ ಆಂಜನೇಯ ದೇವಾಲಯದ ಬಳಿ ಇರುವ ಅರಳಿ ಮರದ ರೆಂಬೆಗಳನ್ನು ಕಟಾವು ಮಾಡಿದ ವಿಚಾರ ಗ್ರಾಮದಲ್ಲಿ ಜಟಾಪಟಿಗೆ ಕಾರಣವಾಗಿದ್ದು, ಘಟನೆಯ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಗ್ರಾಮದ ದೇವಾಲಯದ ಬಳಿ ಇರುವ ಅರಳಿ ಮರದ ಕೆಲವು ರೆಂಬೆಗಳನ್ನು ಕಟಾವು ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗ್ರಾಮದ ಕೆಲ ಯುವಕರು ಮಾರಿಕುಪ್ಪಂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಗದೀಶ್‌ಗೆ ದೂರವಾಣಿ ಮೂಲಕ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಅಭಿವೃದ್ಧಿ ಅಧಿಕಾರಿ ಜಗದೀಶ್ ಹಾಗೂ ಪಂಚಾಯಿತಿ ಕಾರ್ಯದರ್ಶಿ ಚಂದ್ರಪ್ಪ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಮಹಜರು ಕೈಗೊಂಡರು.


ಇದೇ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಗದೀಶ್ ಹಾಗೂ ಕಾರ್ಯದರ್ಶಿ ಚಂದ್ರಪ್ಪ ಅವರು ಜಾಗದ ಮಾಲೀಕರನ್ನು ಕರೆಸಿ, ಅವರ ಬಳಿಯಿದ್ದ ಜಾಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದರು. ಇದೇ ವೇಳೆ ಗ್ರಾಮಸ್ಥರ ಹೇಳಿಕೆಗಳನ್ನು ಸಹ ಪಡೆದರು. ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ಗ್ರಾಮಸ್ಥರು ಅಧಿಕಾರಿಗಳಿಗೆ ಮರದ ರೆಂಬೆಗಳನ್ನು ಕಟಾವು ಮಾಡಿದ ಹಿನ್ನೆಲೆ ಮತ್ತು ಅಶ್ವತ್ಥ ಕಟ್ಟೆ ನಿರ್ಮಾಣದ ಉದ್ದೇಶದ ಕುರಿತು ವಿವರವಾಗಿ ಮನವರಿಕೆ ಮಾಡಿಕೊಟ್ಟರು.


ಈ ಕುರಿತು ಮಾತನಾಡಿದ ಮಾರಿಕುಪ್ಪಂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಗದೀಶ್, ಸ್ಥಳದ ಮೂಲ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ಜಾಗದ ಮಾಲೀಕರು ಹಾಗೂ ಗ್ರಾಮಸ್ಥರ ಹೇಳಿಕೆಗಳನ್ನು ಪಡೆಯಲಾಗಿದೆ. ಪ್ರಕರಣದ ಸಂಪೂರ್ಣ ವಿವರವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಅಗತ್ಯವಿದ್ದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೂ ತಂದು ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.