ಟೆಲ್ ಅವೀವಾ, ಜೂ.೧೩- ಇರಾನ್ ವಿರುದ್ಧ ‘ಉದ್ದೇಶಿತ ಮಿಲಿಟರಿ ಕಾರ್ಯಾಚರಣೆ’ಯನ್ನು ಇಸ್ರೇಲ್ ಸೇನೆ ಆರಂಭಿಸಿದೆ. ಈ ಮೂಲಕ ಬಂಡುಕೋರರಿಗೆ ಬೆಂಬಲ ನೀಡುತ್ತಿರುವ ಇರಾನ್‌ಗೆ ಮುಟ್ಟಿ ನೋಡಿಕೊಳ್ಳುವ ಮಟ್ಟಿಗೆ ತಿರುಗೇಟು ನೀಡುವುದಾಗಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ.
ಇರಾನ್‌ನ ಪರಮಾಣು ಮತ್ತು ಮಿಲಿಟರಿ ತಾಣಗಳ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲ್ ಘೋಷಿಸಿದ ನಂತರ, ಇರಾನ್ ಮೇಲಿನ ಇಸ್ರೇಲ್‌ನ ದಾಳಿ “ಎಷ್ಟು ದಿನಗಳವರೆಗೆ ಮುಂದುವರಿಯುತ್ತದೆ” ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಇರಾನ್‌ನ ರಾಜಧಾನಿ ಟೆಹ್ರಾನ್‌ನ ಮೇಲೆ ಇಸ್ರೇಲ್ ಸೇನೆ ಖಂಡಾಂತರ ಕ್ಷಿಪಣಿ ದಾಳಿ ನಡೆಸಿದೆ, ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ದಾಳಿ ನಡೆಸಿದ್ದು ಉಭಯ ದೇಶಗಳ ನಡುವೆ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.
ಈ ನಡುವೆ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು, ಇರಾನ್ ವಿರುದ್ದ ನಡೆಸುತ್ತಿರುವ ಸೇನಾ ಕಾರ್ಯಾಚರಣೆಗೆ “ರೈಸಿಂಗ್ ಲಯನ್” ಎಂದು ಹೆಸರಿಡಲಾಗಿದೆ. ಬಂಡುಕೋರರು ಮತ್ತು ಭಯೋತ್ಪಾದಕರಿಗೆ ಇರಾನ್ ಬೆಂಬಲ ನೀಡುವುದನ್ನು ನಿಲ್ಲಿಸುವ ತನಕ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಇರಾನ್‌ನ ಪರಮಾಣು ಕೇಂದ್ರಗಳನ್ನು ಗುರಿಯಾಗುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದ್ದು ಇರಾನ್‌ನ ಖಂಡಾಂತರ ಕ್ಷಿಪಣಿ ಕಾರ್ಯಕ್ರಮದ ಹೃದಯಭಾಗದ ಮೇಲೂ ನಾವು ದಾಳಿ ಮಾಡಿದ್ದೇವೆ” ಎಂದು ಅವರು ಹೇಳಿದ್ದಾರೆ.
“ಈ ಮಿಲಿಟರಿ ಕಾರ್ಯಾಚರಣೆ ಇಸ್ರೇಲ್‌ನ ಉಳಿವಿಗೆ ಇರಾನ್‌ನಿಂದ ಬಂದಿರುವ ಬೆದರಿಕೆ ಹಿಮ್ಮೆಟ್ಟಿಸುವ ಗುರಿ ಹೊಂದಿದೆ. ಆ ಬೆದರಿಕೆ ತೊಡೆದುಹಾಕಲು ಅಗತ್ಯವಿರುವಷ್ಟು ದಿನಗಳವರೆಗೆ ಕಾರ್ಯಾಚರಣೆ ಮುಂದುವರಿಯುತ್ತದೆ. ದಶಕಗಳಿಂದ, ಟೆಹ್ರಾನ್‌ನಲ್ಲಿರುವ ದಬ್ಬಾಳಿಕೆ ಮಾಡುತ್ತಿರುವ ಮಂದಿಗೆ ತಕ್ಕ ತಿರುಗೇಟು ನೀಡಲು ಉದ್ದೇಶಿಸಲಾಗಿದೆ ಎಂದಿದ್ದಾರೆ.