ಇಸ್ರೇಲ್ ದಾಳಿ, ಇರಾನ್‌ನ ೧೫ ವಿಮಾನ ಧ್ವಂಸ

ಟೆಹರಾನ್, ಜೂ.೨೩- ಇರಾನ್ ನ ೬ ಸೇನಾ ನೆಲೆ ಮತ್ತು ವಿಮಾನ ನಿಲ್ದಾಣಗಳ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು ೧೫ ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಧ್ವಂಸ ಮಾಡಿದೆ.


ಇರಾನ್ ಅಣುಬಾಂಬ್ ಸ್ಥಾವರದ ಮೇಲೆ ಅಮೆರಿಕಾ ದಾಳಿ ನಡೆಸಿ ಮೂರು ಅಣುಸ್ಥಾವರ ನಾಶ ಮಾಡಿದ ಬೆನ್ನಲ್ಲೇ ಇಸ್ರೇಲ್ ಕೂಡ ವಿಮಾನ ನಿಲ್ದಾಣ ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.


ಇಸ್ರೇಲ್ ಮೇಲೆ ದಾಳಿ ನಡೆಸಲು ಇರಾನ್ ಉದ್ದೇಶಿಸಿದ್ದ ಹಿನ್ನೆಲೆಯಲ್ಲಿ ಇಸ್ರೇಲ್ ೬ ಸೇನಾ ನೆಲೆ ಮತ್ತು ವಿಮಾನ ನಿಲ್ದಾಣ ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.


ಇಸ್ರೇಲ್ ರಕ್ಷಣಾ ಪಡೆಗಳು ಆರು ಇರಾನಿನ ಮಿಲಿಟರಿ ವಿಮಾನ ನಿಲ್ದಾಣಗಳ ಮೇಲೆ ದಾಳಿ ಮಾಡಿದೆ ಮತ್ತು ೧೫ ಯುದ್ಧ ವಿಮಾನಗಳನ್ನು ನಾಶಪಡಿಸಿದೆ ಎಂದು ಹೇಳಿಕೊಂಡಿದೆ. ಆದರೆ ಇರಾನ್ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.


ಇಸ್ರೇಲ್ ಸೇನೆ ನಾಶ ಮಾಡಿದ ಜೆಟ್‌ಗಳಲ್ಲಿ ಇರಾನ್ ಮಿಲಿಟರಿಗೆ ಸೇರಿದ ಎಫ್ -೧೪, ಎಫ್ -೫ ಮತ್ತು ಎ.ಎಚ್ -೧ ವಿಮಾನಗಳು ಸೇರಿವೆ ಎಂದು ಐಡಿಎಫ್ ಹೇಳಿದೆ, ವಿಮಾನಗಳನ್ನು ನಾಶ ಮಾಡುವ ಜೊತೆಗೆ ವಿಮಾನದ ರನ್ ವೇ ನಾಶ ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದೆ.


ಇಸ್ರೇಲ್ ಸೇನೆ ಪಶ್ಚಿಮ, ಪೂರ್ವ ಮತ್ತು ಮಧ್ಯ ಇರಾನ್‌ನಲ್ಲಿರುವ ಆರು ಇರಾನಿನ ಆಡಳಿತ ವಿಮಾನ ನಿಲ್ದಾಣಗಳ ಮೇಲೆ ದಾಳಿ ಮಾಡಿದ್ದು ಹಾನಿಯ ಕುರಿತು ಅಂದಾಜು ಮಾಡಬೇಕಾಗಿದೆ ಎಂದು ತಿಳಿಸಿದೆ.


ಇರಾನ್‌ನ ಕೆರ್ಮನ್‌ಶಾ ಪ್ರದೇಶದಲ್ಲಿ ಮಿಲಿಟರಿ ಗುಪ್ತಚರ ಕಚೇರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ತನ್ನ ಅಧಿಕೃತ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದೆ.