ಬೀದರ,ಅ.೫: ಹಿರಿಯ ಸಾಹಿತಿ, ಸೌಹಾರ್ದತೆಯ ಸಾಕಾರಮೂರ್ತಿ ರುಕ್ಮೋದ್ದಿನ್ ಇಸ್ಲಾಂಪುರ ಅವರ ಅಕಾಲಿಕ ಮರಣದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರವಾದ ನಷ್ಟವಾಗಿದೆ ಎಂದು ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ ತಿಳಿಸಿದರು.
ನಗರದ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಸಂಘದ ವತಿಯಿಂದ ಜರುಗಿದ ಹಿರಿಯ ಸಾಹಿತಿ ರುಕ್ಮೋದ್ದಿನ್ ಇಸ್ಲಾಂಪುರ ಅವರ ನುಡಿನಮನ ಕಾರ್ಯಕ್ರಮದಲ್ಲಿ ಶೃದ್ಧಾಂಜಲಿ ಸಲ್ಲಿಸಿ ಮಾತನಾಡಿದರು. ಕೆಕೆಆರ್‌ಟಿಸಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಸ್ಲಾಂಪುರ ಅವರು ಸರಳ ಸಜ್ಜನಿಕೆಗೆ ಹೆಸರಾಗಿ ಮುಗ್ಧ ಸ್ವಭಾವದವರಾಗಿದ್ದರು. ಕಥಾ ಸಂಕಲನ, ಕವನ ಸಂಕಲನ, ಕಾದಂಬರಿ, ಜೀವನ ಚರಿತ್ರೆ, ಲೇಖನಗಳ ಸಂಚಯನ ಸೇರಿದಂತೆ ಸುಮಾರು ೧೦ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಸಮರ್ಪಣೆ ಮಾಡಿದ್ದಾರೆ. ಅವರು ಶಿಕ್ಷಣದಲ್ಲಿ ಸುಮಾರು ೧೦ಕ್ಕೂ ಹೆಚ್ಚು ಪದವಿಗಳನ್ನು ಪಡೆದುಕೊಂಡು ಪ್ರತಿಭಾವಂತ ಸೃಜನಶೀಲ ಬರಹಗಾರರಾಗಿದ್ದರು ಎಂದು ಹೆಬ್ಬಾಳೆ ತಿಳಿಸಿದರು.
ಬಡತನದ ಬೇಗೆಯಲ್ಲಿ ಜನಿಸಿದ ಇಸ್ಲಾಂಪುರ ಅವರು ಉನ್ನತ ಮಟ್ಟಕ್ಕೆ ಬೆಳೆದು ಸಾಹಿತ್ಯ ಲೋಕದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಹಿರಿಯರಿಗೆ ಗೌರವ, ಕಿರಿಯರಿಗೆ ಹುರಿದುಂಬಿಸುವ ಮನೋಭಾವ ಬೆಳೆಸಿಕೊಂಡಿದ್ದ ಅವರು ದೇಶದ ಬಗ್ಗೆ ಅಪಾರ ಭಕ್ತಿ ಹೊಂದಿದ್ದರು. ಗಟ್ಟಿ ಬರಹಗಾರರು, ಪ್ರತಿಭಾವಂತ ಸಾಹಿತಿ, ಸೌಹಾರ್ದತೆಯಿಂದ ಎಲ್ಲಾ ಧರ್ಮಿಯರೊಂದಿಗೆ ಬದುಕಿದ ಮಹಾನುಭಾವರಾಗಿದ್ದರು. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಮೌಲ್ಯಯುತ ಸಾಹಿತ್ಯದ ಅಂಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ ಮಾತನಾಡಿ ರುಕ್ಮೋದ್ದಿನ್ ಇಸ್ಲಾಂಪೂರ ಅವರು ಜಿಲ್ಲೆ ಕಂಡ ಅಪರೂಪದ ಸಾಹಿತಿಯಾಗಿದ್ದರು. ಸದಾ ಧನಾತ್ಮಕ ವಿಚಾರಗಳನ್ನು ಮೈಗೂಡಿಸಿಕೊಂಡು ಹಿರಿಯರನ್ನು ಮತ್ತು ಕಿರಿಯ ಸಾಹಿತಿಗಳನ್ನು ಹುರಿದುಂಬಿಸುತ್ತಿದ್ದರು. ಬಹುಶಃ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ತಾಲೂಕಾ ಅಥವಾ ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಅವರಿಗೆ ಆಯ್ಕೆ ಮಾಡಬಹುದಾಗಿತ್ತು. ಅದೊಂದು ಹಾಗೇ ಉಳಿಯಿತು ಎಂದು ಕಳವಳ ವ್ಯಕ್ತಪಡಿಸಿದರು.ಸಾಹಿತಿ ಓಂಪ್ರಕಾಶ ಧಡ್ಡೆ ಮಾತನಾಡಿ ಅವರಲ್ಲಿ ಕಪಟ, ಮೋಸ, ಸಿಟ್ಟು ಎನ್ನುವುದೇ ಇರಲಿಲ್ಲ. ಅಂತಹ ಸೌಮ್ಯ ಸ್ವಭಾವದವರಾಗಿದ್ದರು. ನಾವು ಕಬೀರದಾಸ, ಶಿಶುನಾಳ ಶರೀಫರನ್ನು ನೋಡಲಿಲ್ಲ. ಆ ಗುಣಗಳನ್ನು ನಾವು ರುಕ್ಮೋದ್ದಿನ್ ಅವರಲ್ಲಿ ಕಾಣುತ್ತೇವೆ ಎಂದರು.
ಇದೇ ವೇಳೆ ಇಸ್ಲಾಂಪುರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಒಂದು ನಿಮಿಷ ಮೌನಾಚರಣೆ ಮಾಡಿ, ನುಡಿನಮನ ಸಲ್ಲಿಸಲಾಯಿತು. ಹಲವಾರು ಹಿರಿಯ ಸಾಹಿತಿಗಳನ್ನು ತಮ್ಮ ಅಭಿಪ್ರಾಯಗಳನ್ನು ಹಾಗೂ ಇಸ್ಲಾಂಪುರ ಅವರೊಂದಿಗಿನ ಒಡನಾಟದ ಅನುಭವಗಳನ್ನು ಹಂಚಿಕೊAಡರು.
ಇದೇ ವೇಳೆ ಪ್ರಮುಖರಾದ ಶಂಕ್ರೆಪ್ಪ ಹೊನ್ನಾ, ಶಿವಕುಮಾರ ನಾಗವಾರ, ಗುರುರಾಜ ಕುಲಕರ್ಣಿ, ಪ್ರೊ.ಎಸ್.ವಿ.ಕಲ್ಮಠ, ಪ್ರಭಾಕರ ಎ.ಎಸ್. ರಮೇಶ ಬಿರಾದಾರ, ಸತ್ಯಮೂರ್ತಿ, ನಿಜಲಿಂಗಪ್ಪ ತಗಾರೆ, ವೈಜಿನಾಥ ಪಾಟೀಲ, ಎಸ್.ಬಿ.ಕುಚಬಾಳ, ಡಾ. ಸುನಿತಾ ಕೂಡ್ಲಿಕರ್, ಮಹಾರುದ್ರ ಡಾಕುಳಗಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
























