Home ಜಿಲ್ಲೆ ಕಲಬುರಗಿ ಕಲಬುರಗಿಯ ದಖನ್ ಪರಂಪರೆಯನ್ನು ಎತ್ತಿಹಿಡಿದ ಇಸ್ಲಾಮಿಕ್ ಕಲಾ ಪ್ರದರ್ಶನ

ಕಲಬುರಗಿಯ ದಖನ್ ಪರಂಪರೆಯನ್ನು ಎತ್ತಿಹಿಡಿದ ಇಸ್ಲಾಮಿಕ್ ಕಲಾ ಪ್ರದರ್ಶನ

ಕಲಬುರಗಿ: ದಖನ್ ಸುಲ್ತಾನರು ಕಲಬುರಗಿಯ ಸಾಂಸ್ಕøತಿಕ ಮತ್ತು ಕಲಾತ್ಮಕ ಪರಂಪರೆಗೆ ನೀಡಿದ ಶ್ರೀಮಂತ ಕೊಡುಗೆ ನಗರದ ವಾಸ್ತುಶಿಲ್ಪ, ಕಲೆ ಹಾಗೂ ಕ್ಯಾಲಿಗ್ರಫಿಯಲ್ಲಿ ಸ್ಪಷ್ಟವಾಗಿ ಪ್ರತಿಬಿಂಬಿತವಾಗಿದೆ ಎಂದು ಇತಿಹಾಸಕಾರ ಹಾಗೂ ವಕೀಲರಾದ ಡಾ. ಮಕ್ಸೂದ್ ಅಫ್ಜಲ್ ಜಾಗೀರ್ದಾರ್ ಹೇಳಿದರು.

ಬುಧವಾರ ಕಲಬುರಗಿಯ ಹಿದಾಯತ್ ಸೆಂಟರ್‍ನಲ್ಲಿ ಈದ್ ಮಿಲಾದ್-ಉನ್-ನಬಿ ಅಂಗವಾಗಿ ಆಯೋಜಿಸಲಾಗಿದ್ದ ಎರಡು ದಿನಗಳ 6ನೇ ಇಸ್ಲಾಮಿಕ್ ಕಲಾ ಪ್ರದರ್ಶನ ಮತ್ತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಪ್ರದರ್ಶನದ ಸಂಚಾಲಕ ಮೊಹಮ್ಮದ್ ಅಯಾಜುದ್ದೀನ್ ಪಟೇಲ್, ವಿವಿಧ ಸಮುದಾಯಗಳ ಕಿರಿಯ ಹಾಗೂ ಹಿರಿಯ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಅವರ ಕಲಾ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಿರುವುದರಿಂದ ಈ ಕಾರ್ಯಕ್ರಮ ನಗರದಲ್ಲಿ ವಿಶಿಷ್ಟವಾಗಿದೆ ಎಂದು ಹೇಳಿದರು. ವೈವಿಧ್ಯಮಯ ಇಸ್ಲಾಮಿಕ್ ಕಲಾ ಪ್ರಕಾರಗಳನ್ನು ಪರಿಚಯಿಸುವುದರ ಜೊತೆಗೆ ಕೋಮು ಸೌಹಾರ್ದತೆಯನ್ನು ಉತ್ತೇಜಿಸಲು ಈ ಪ್ರದರ್ಶನವು ಉತ್ತಮ ಅವಕಾಶ ಒದಗಿಸುತ್ತದೆ ಎಂದರು.

ಸುದ್ದಿ ಸಮಯ ಪತ್ರಿಕೆಯ ಸಂಪಾದಕ ಭವಾನಿ ಸಿಂಗ್ ಠಾಕೂರ್ ಅವರು ಕಲಬುರಗಿಯ ಹಲವಾರು ಐತಿಹಾಸಿಕ ಸ್ಮಾರಕಗಳ ಕಲಾತ್ಮಕ ಮಹತ್ವವನ್ನು ವಿವರಿಸಿದರು. ಅನೇಕ ಸ್ಮಾರಕಗಳಲ್ಲಿ ಸುಂದರವಾದ ಚಿತ್ರಕಲೆ ಹಾಗೂ ಕಲಾಕೃತಿಗಳು ಕಂಡುಬರುತ್ತವೆ. ನಗರದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಖ್ವಾಜಾ ಬಂದನವಾಜ್ ದರ್ಗಾ ಪ್ರಮುಖ ಉದಾಹರಣೆಯಾಗಿದೆ ಎಂದು ಅವರು ತಿಳಿಸಿದರು.

ಮೊಹಮ್ಮದ್ ರಫೀಕ್ ಪಲ್ಲನ್ ಹಾಗೂ ಖ್ಯಾತ ಕಲಾವಿದ ಟಿ. ದೇವೇಂದ್ರ ಅವರು ಕೂಡ ಕಾರ್ಯಕ್ರಮದಲ್ಲಿ ಮಾತನಾಡಿ, ಕಲೆಯನ್ನು ಉತ್ತೇಜಿಸುವ ಹಾಗೂ ಕಲಾವಿದರನ್ನು ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ ಆಯೋಜಕರು ಮಾಡುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದರು.

ಕಾರ್ಯಕ್ರಮದ ಅಂಗವಾಗಿ, ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ರಾಷ್ಟ್ರಪತಿ ಭವನದಲ್ಲಿ ಗೌರವ ಸ್ವೀಕರಿಸಿದ ಕಲಾವಿದ ರೆಹಮಾನ್ ಪಟೇಲ್ ಅವರನ್ನು ಸಂಘಟನಾ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.

ಇಸ್ಲಾಮಿಕ್ ಕಲೆಯನ್ನು ಉತ್ತೇಜಿಸುವುದು, ಕಲಬುರಗಿಯ ಐತಿಹಾಸಿಕ ಕಲಾ ಪರಂಪರೆಗಳನ್ನು ಸಂರಕ್ಷಿಸುವುದು ಹಾಗೂ ವಿವಿಧ ಹಿನ್ನೆಲೆಯ ಕಲಾವಿದರು ಪರಸ್ಪರ ಸಂವಹನ ನಡೆಸಿ ತಮ್ಮ ಸೃಜನಶೀಲ ಕೃತಿಗಳನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸುವುದು ಪ್ರದರ್ಶನ ಮತ್ತು ವಿಚಾರ ಸಂಕಿರಣದ ಉದ್ದೇಶವಾಗಿದೆ.