ಅನೈತಿಕ ಸಂಬಂಧಕ್ಕೆ ಅಡ್ಡಿ; ಸುಪಾರಿ ಕೊಟ್ಟು ಪತಿ ಕೊಲೆ ?

ಕಲಬುರಗಿ,ನ.18-ಅನೈತಿಕ ಸಂಬಂಧಕ್ಕೆ ಅಡ್ಡಿ ಪಡಿಸಿದ ಪತಿಯನ್ನು ಪತ್ನಿ ವiತ್ತು ಆಕೆಯ ಪ್ರಿಯಕರರು ಸೇರಿ ಸುಪಾರಿ ನೀಡಿ ಕೊಲೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕಣ್ಣಿ ಗ್ರಾಮದ ಬೀರಪ್ಪ ಅಲಿಯಾಸ್ ಬಸ್ಯಾ ತಂದೆ ಶಿವಶರಣಪ್ಪ ಪೂಜಾರಿ ಕೊಲೆಯಾದವರು.
ಬೀರಪ್ಪ ಅಲಿಯಾಸ್ ಬಸ್ಯಾ ಅವರ ಪತ್ನಿ ಶಾಂತಾಬಾಯಿ ಜೊತೆ ಗ್ರಾಮದ ಸಿದ್ದು ಅಲಿಯಾಸ್ ಜೆಸಿಬಿ ಸಿದ್ದು ತಂದೆ ಮಲ್ಲಣ್ಣ ಬಾಗಲಕೋಟೆ ಮತ್ತು ಶಂಕರ ತಂದೆ ದೇವಿಂದ್ರಪ್ಪ ಬಿಚಗತ್ತಿ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ಸಂಬಂಧ ಬೀರಪ್ಪ ಇವರಿಬ್ಬರಿಗೆ ಬುದ್ಧಿವಾದ ಹೇಳಿದ್ದರೂ ಅವರು ಈತನ ಮಾತು ಕೇಳಿರಲಿಲ್ಲ ಎನ್ನಲಾಗಿದ್ದು, ಇದೇ ಕಾರಣಕ್ಕೆ ಬೀರಪ್ಪ ಕುಡಿತದ ಚಟಕ್ಕೆ ಒಳಗಾಗಿದ್ದ. 2016ರ ಮಾರ್ಚ್/ಏಪ್ರಿಲ್ ತಿಂಗಳಲ್ಲಿ ಗ್ರಾಮದ ಸುಭಾಷ ಸಾಹುಕಾರ ಗೋಧಿಪಟ್ಟಿ ಹೊಲದಲ್ಲಿ (ಸದ್ಯ ಲೇಔಟ್) ಈತನ ಶವ ಪತ್ತೆಯಾಗಿತ್ತು. ಈತನ ಮನೆಯವರು ಮತ್ತು ಸಂಬಂಧಿಕರು ಬೀರಪ್ಪ ಕುಡಿದ ನಶೆಯಲ್ಲಿ ಸತ್ತಿರಬಹುದು ಎಂದು ಭಾವಿಸಿ ಮೃತದೇಹದ ಅಂತ್ಯಕ್ರಿಯೆ ನೆರವೇರಿಸಿದ್ದರು. ಆದರೆ, ಕಳೆದ 5-6 ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಬೀರಪ್ಪನಿಗೆ ಸಂಬಂಧಿಸಿದ ವಿಡಿಯೋ ಹರಿದಾಡಿದ್ದು, ಅದರಲ್ಲಿ ಕಣ್ಣಿ ಹೊಸ ತಾಂಡಾದ ಮಹೇಶ ರಾಠೋಡ್ ಎಂಬಾತ ಶಾಂತಾಬಾಯಿ ಜೊತೆ ಮಾತನಾಡಿರುವುದು ಬೆಳಕಿಗೆ ಬಂದಿದೆ. ಮಹೇಶ ತಂದೆ ಪಾಂಡು ರಾಠೋಡ್ ಬೀರಪ್ಪನ ಕೊರಳಿಗೆ ಟಾವೆಲ್‍ನಿಂದ ಜಗ್ಗಿ ಕೊಲೆ ಮಾಡಿರುವುದು ಮತ್ತು ಸುಪಾರಿ ಕೊಡಬೇಕಾದ 1.20 ಲಕ್ಷ ರೂಪಾಯಿಗಳಲ್ಲಿ 80 ಸಾವಿರ ರೂ.ಕೊಟ್ಟರೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಕಾಂತು ಅಲಿಯಾಸ್ ಸೂರ್ಯಕಾಂತ ಅಲಿಯಾಸ್ ಸುರೇಶ ತಂದೆ ಶಂಕರ ರಾಠೋಡ್ ಇರುವ ಬಗ್ಗೆ ಹೇಳುತ್ತೇನೆ. ಇಲ್ಲದಿದ್ದಲ್ಲಿ ಪೊಲೀಸರಿಗೆ ಎಲ್ಲಾ ವಿಷಯ ತಿಳಿಸುತ್ತೇನೆ ಎಂಬ ಸಂಭಾಷಣೆ ಇದ್ದು, ಇದನ್ನು ನೋಡಿದರೆ ಅನೈತಿಕ ಸಂಬಂಧಕ್ಕೆ ಅಡ್ಡಿ ಪಡಿಸಿದ ಬೀರಪ್ಪನನ್ನು ಅವನ ಪತ್ನಿ ಶಾಂತಾಬಾಯಿ, ಸಿದ್ದು ಅಲಿಯಾಸ್ ಜೆಸಿಬಿ ಸಿದ್ದು, ಶಂಕರ ಬಿಚಗತ್ತಿ ಅವರು ಸೇರಿ ಮಹೇಶ ರಾಠೋಡ್ ಮತ್ತು ಕಾಂತು ರಾಠೋಡ್‍ಗೆ ಸುಪಾರಿ ಕೊಟ್ಟು ಕೊಲೆ ಮಾಡಿರಬಹುದು ಎಂದು ಮೃತ ಬೀರಪ್ಪ ಸಹೋದರ ಭೀಮಾಶಂಕರ ಪೂಜಾರಿ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.