
ಬೀದರ: ಮಾ.೧೪:ಬೀದರ ವಿಶ್ವವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಶುಕ್ರವಾರ ವೈಭವದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ.ಎಸ್. ಬಿರಾದಾರ ಅವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಕಲಬುರಗಿಯ ಉಪ ಕಾರ್ಯದರ್ಶಿಗಳಾದ ಸುರೇಖಾ ಕೆ.ಎ.ಎಸ್. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಮಹಿಳೆಯರ ಪಾತ್ರ ಮತ್ತು ಸಾಧನೆಯ ಮಹತ್ವವನ್ನು ವಿವರಿಸಿದರು. ಮಹಿಳೆಯರು ಶಿಕ್ಷಣ, ಉದ್ಯೋಗ ಹಾಗೂ ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದು, ಅವರ ಸಬಲೀಕರಣದಿಂದ ಸಮಾಜದ ಸಮಗ್ರ ಅಭಿವೃದ್ಧಿ ಸಾಧ್ಯವೆಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಬೆಂಗಳೂರು ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಕಾಶಿನಾಥ ಬೆಳದಾಳೆ ಅವರು ಮಾತನಾಡಿ, ಮಹಿಳೆಯರು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಸಮಾಜದಲ್ಲಿ ಮುನ್ನಡೆಯುವಾಗ ದೇಶವೂ ದೃಢವಾಗಿ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ನಾಗಭೂಷಣ ಕಮಠಾಣೆ, ಶಾಂತಲಿAಗ ಸಾವಳಗಿ, ವಿಠಲ್‌ದಾಸ್ ಪ್ಯಾಗೆ ಹಾಗೂ ಅಬ್ದುಲ್ ಸತ್ತಾರ್ ಅವರು ಗೌರವ ಉಪಸ್ಥಿತಿ ನೀಡಿದರು.
ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಸ್ಪರ್ಧೆಗಳಾದ ಗುಂಡು ಎಸೆತ, ಲೆಮನ್ ಸ್ಪೂನ್, ತ್ರೋಬಾಲ್, ಗಾಯನ, ರಂಗೋಲಿ ಸೇರಿದಂತೆ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಅತಿಥಿಗಳಿಂದ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಪರಮೇಶ್ವರ ನಾಯ್ಕ ಅವರು ಸ್ವಾಗತಿಸಿದರು. ಕಾರ್ಯಕ್ರಮವನ್ನು ಡಾ. ಅಂಬರೀಷ್ ವೀರನಾಯಕ ಅವರು ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿಗಳಾದ ಡಾ. ರವೀಂದ್ರ ಗಬಾಡೆ ಅವರು ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.




















