ಬಡತನವನ್ನು ನಿರ್ಮೂಲನೆಗೆ ಅಂತರಾಷ್ಟ್ರೀಯ ಸಹಕಾರ ಅಗತ್ಯ

ಕಲಬುರಗಿ : ಅ.೧೭:ಬಡತನ ಕೇವಲ ಆರ್ಥಿಕ ಸಮಸ್ಯೆಯಲ್ಲ. ಅದು ಬಹು ಆಯಾಮವನ್ನು ಹೊಂದಿದೆ. ಬಡತನ ಯಾವುದೇ ರಾಷ್ಟ್ರದ ಸರ್ವತೋಮುಖ ಬೆಳವಣಿಗೆಗೆ ಮಾರಕವಾಗಿದ್ದು, ಅದನ್ನು ನಿರ್ಮೂಲನೆ ಮಾಡಲು ಅಂತಾರಾಷ್ಟ್ರೀಯ ಸಹಕಾರ ಮತ್ತು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು. ನಗರದ ಶಹಾಬಜಾರ ಮಹಾದೇವ ನಗರದಲ್ಲಿನ ಸ್ವಾತಿ ಪ್ರೌಢಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ “ಅಂತಾರಾಷ್ಟ್ರೀಯ ಬಡತನ ನಿರ್ಮೂಲನೆ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಬಡತನದ ವಿರುದ್ಧ ಹೋರಾಡುವಲ್ಲಿ ಜನರ ಪ್ರಯತ್ನಗಳನ್ನು ಗುರುತಿಸುವುದು ಮತ್ತು ಬಡವರ ಧ್ವನಿಗೆ ಕಿವಿಗೊಡುವುದು ದಿನಾಚರಣೆಯ ಉದ್ದೇಶವಾಗಿದೆ. ಬಡತನ ನಿರ್ಮೂಲನೆಗೆ ನಿರಂತರ ಪ್ರಯತ್ನ ಮಾಡಲಾಗಿದ್ದರ ಫಲವಾಗಿಂದು ಬಡತನದ ಪ್ರಮಾಣ ಕಡಿಮೆಯಾಗಿದೆ. ಮೊದಲ ದಶಕ-೧೯೯೭-೨೦೦೬ರ ಅವಧಿಯಲ್ಲಿ ಬಡತನವನ್ನು ಕಡಿಮೆ ಮಾಡಲು ಜಾಗತಿಕ ಪ್ರಯತ್ನಗಳನ್ನು ಉತ್ತೇಜಿಸುವತ್ತ ಗಮನಹರಿಸಲಾಗಿದೆ. ಎರಡನೇ ದಶಕ -೨೦೦೮-೨೦೧೭ದಲ್ಲಿ ಎಲ್ಲರಿಗೂ ಸಾಮಾಜಿಕ ಮತ್ತು ಆರ್ಥಿಕ ಸೇರ್ಪಡೆ ಸಾಧಿಸುವ ಗುರಿಯನ್ನು ಹೊಂದಿದೆ.ಮೂರನೇ ದಶಕ -೨೦೧೮-೨೦೨೭ರ ಅವಧಿಯಲ್ಲಿ ಸಾಮಾಜಿಕ ರಕ್ಷಣೆ ಮತ್ತು ಆರ್ಥಿಕ ಸೇರ್ಪಡೆಯ ಮೇಲೆ ಕೇಂದ್ರೀಕರಿಸಿ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಂಯೋಜಿಸುವ ಮೂಲಕ ಬಡತನವನ್ನು ನಿರ್ಮೂಲನೆ ಮಾಡುವ ಪ್ರಯತ್ನಗಳನ್ನು ಮುಂದುವರೆಸಿದೆ ಎಂದು ಬಡತನ ನಿರ್ಮೂಲನೆಯ ಉಪಕ್ರಮಗಳನ್ನು ವಿವರಿಸಿದರು.
ಭಾರತದಲ್ಲಿನ ಈ ಬಡತನ ನಿರ್ಮೂಲನಾ ಕಾರ್ಯಕ್ರಮಗಳು ಬಡತನದ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ, ಆರ್ಥಿಕ ಅವಕಾಶಗಳನ್ನು ಒದಗಿಸುವಲ್ಲಿ ಮತ್ತು ಲಕ್ಷಾಂತರ ಜನರ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಬಡತನ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಸಮಾಜ ಸೇವಕ ಅಮರ ಜಿ.ಬಂಗರಗಿ, ಮುಖ್ಯ ಶಿಕ್ಷಕಿ ಸಂಗೀತಾ ಸಾಲಿ, ಶಿಕ್ಷಕಿಯರಾದ ಪೂರ್ಣಿಮಾ, ಕಾಶಮ್ಮ, ಪ್ರೀತಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.