ಬಿಜೆಪಿಯಲ್ಲಿ ಒಳ ಜಗಳ ಕಾಯಿಲೆಗೆ ಮುಲಾಮು :ಡಿವಿಎಸ್

ಬೆಂಗಳೂರು, ಜು. ೫- ಬಿಜೆಪಿಯಲ್ಲಿ ಆಂತರಿಕ ಜಗಳ ಬಹಳ ದೊಡ್ಡ ಕಾಯಿಲೆಯಾಗಿದೆ. ಬೆಳಗಾವಿಯಿಂದ ಹಿಡಿದು ಬೆಂಗಳೂರಿನವರೆಗೂ ಈ ಕಾಯಿಲೆ ವ್ಯಾಪಿಸಿದೆ. ಇದನ್ನು ಗುಣಪಡಿಸುವ ಕೆಲಸವನ್ನು ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಹೇಳಿದರು.


ಬಿಜೆಪಿಯ ಆಂತರಿಕ ಸಮಸ್ಯೆ ಪರಿಹಾರಕ್ಕಾಗಿ ಪ್ರಹ್ಲಾದ್ ಜೋಷಿ ಅವರ ನೇತೃತ್ವದಲ್ಲಿ ಸಭೆ ಮಾಡಿ ಎಂದು ಹೈಕಮಾಂಡ್ ಹೇಳಿದೆ. ಅದರಂತೆ ನಾನು, ಪ್ರಹ್ಲಾದ್ ಜೋಷಿ, ಗೋವಿಂದಕಾರಜೋಳ ಹೀಗೆ ಒಂದು ತಂಡ ಇದೆ. ಎಲ್ಲರೂ ಸೇರಿ ಜಿಲ್ಲೆಗಳಿಗೆ ತೆರಳಿಯೇ ಸಮಸ್ಯೆ ಬಗೆಹರಿಸುವ ಸಭೆ ನಡೆಸುತ್ತೇವೆ ಎಂದರು.


ಯಾವುದೇ ವಿಚಾರ ಇದ್ದರೂ ಈ ಸಭೆಯಲ್ಲಿ ಚರ್ಚೆ ಮಾಡಬಹುದು. ಸ್ಥಳೀಯ ನಾಯಕರನ್ನು ನಮ್ಮ ಜತೆ ಸೇರಿಸಿಕೊಳ್ಳುತ್ತೇವೆ. ಸ್ಥಳೀಯ ಸಮಸ್ಯೆಗಳನ್ನು ಹೈಕಮಾಂಡ್ ಮಟ್ಟದಲ್ಲಿ ಬಗೆಹರಿಸಲು ಆಗಲ್ಲ. ಈಗಾಗಲೇ ತಡವಾಗಿದೆ. ಇನ್ನು ಮುಂದೆ ಎಲ್ಲ ಸಮಸ್ಯೆಗಳು ಬಗೆಹರಿಯಲಿದೆ. ಕೋರ್ ಕಮಿಟಿ ಮಾಡಿ ಇಲ್ಲಿಯೇ ಸಮಸ್ಯೆ ಬಗೆಹರಿಸಲಿದ್ದೇವೆ ಎಂದರು.


ನಿನ್ನೆ ದಾವಣಗೆರೆ, ಬಾಗಲಕೋಟೆ ಜಿಲ್ಲೆಯ ನಾಯಕರ ಸಭೆ ಮಾಡಿದ್ದೇವೆ. ನಾವು ಯಾರನ್ನೂ ಪಕ್ಷದಿಂದ ಅಮಾನತು ಮಾಡುವ ಉದ್ದೇಶ ಹೊಂದಿಲ್ಲ. ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದೇವೆ. ಮುಕ್ತ ಚರ್ಚೆಯಿಂದ ಸಮಸ್ಯೆ ಬಗೆಹರಿಯಲಿದೆ ಎಂದರು.


ಬಿಜೆಪಿ ಆಂತರಿಕ ಜಗಳದಿಂದಲೇ ಕಳೆದ ಚುನಾವಣೆಯಲ್ಲಿ ಕೆಲ ಸ್ಥಾನಗಳನ್ನು ಕಳೆದುಕೊಂಡಿತು. ಇದನ್ನು ಸರಿಪಡಿಸದಿದ್ದರೆ ಮತ್ತಷ್ಟು ಸಮಸ್ಯೆ ಆಗುತ್ತದೆ. ನಾವೆ ಸುಪ್ರೀಂ ಎಂಬ ರೀತಿ ಯಾರೂ ನಡೆದುಕೊಳ್ಳಬಾರದು ವ್ಯಕ್ತಿ ಪೂಜೆ ಅಲ್ಲ, ಪಕ್ಷ ಪೂಜೆ ಆಗಬೇಕು ಎಂದರು.


ಪಕ್ಷದಲ್ಲಿ ಆಂತರಿಕ ಜಗಳ ಇರುವುದು ಸ್ವಾಭಾವಿಕ. ಇದೇ ಪಕ್ಷದ ಮುಳುವಿಗೆ ಕಾರಣವಾಗುತ್ತದೆ. ಹಾಗಾಗಿ ಸಮಸ್ಯೆ ಬಗೆಹರಿಸುವಷ್ಟು ಗಮನ ಹರಿಸಿದ್ದೇವೆ ಎಂದರು.


ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್‌ಎಸ್‌ಎಸ್‌ನ್ನು ನಿಷೇಧಿಸಲಾಗುವುದು ಎಂಬ ಸಚಿವ ಪ್ರಿಯಾಂಕ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರದಲ್ಲಿ ಕಾಂಗ್ರೆಸ್ ಅದರದೇ ಶಕ್ತಿಯಿಂದ ಅಧಿಕಾರಕ್ಕೆ ಬರುವಷ್ಟು ಯೋಗ್ಯತೆ ಹೊಂದಿಲ್ಲ. ಅವರಿಗೆ ಬೇರೆ ಬೇರೆ ಪಕ್ಷಗಳ ಬೆಂಬಲಬೇಕು. ಮರಿ ಖರ್ಗೆ ತಮ್ಮ ತಂದೆ ಉನ್ನತ ಹುದ್ದೆಯಲ್ಲಿದ್ದಾರೆ ಎಂದು ಈ ರೀತಿ ಮಾತನಾಡುತ್ತಿದ್ದಾರೆ ಎಂದರು.


ಕೊರೊನಾ ಲಸಿಕೆ ಹೃದಯಾಘಾತಕ್ಕೆ ಕಾರಣವಾಗುತ್ತಿದೆ ಎಂಬ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಹೇಳಿಕೆಗೆಯನ್ನು ತಳ್ಳಿ ಹಾಕಿದ ಅವರು, ಕೊರೊನಾ ಲಸಿಕೆ ಬಂದಾಗ ಸಿದ್ಧರಾಮಯ್ಯ ಅವರೇ ಮೊದಲು ಕ್ಯೂನಲ್ಲಿ ನಿಂತು ಲಸಿಕೆ ತೆಗೆದುಕೊಂಡರು. ಮತ್ತೆ ಐದು ವರ್ಷ ನಾನೇ ಸಿಎಂ ಎಂದು ಹೇಳಲು ಈ ಲಸಿಕೆಯೇ ಕಾರಣ. ಯಾರೇ ಆಗಲಿ ಜವಾಬ್ದಾರಿತನದಲ್ಲಿರುವವರು ಇತಿಮಿತಿ ಅರಿತು ಮಾತನಾಡಬೇಕು. ಅದು ನಮ್ಮ ಪಕ್ಷದವರೇ ಆಗಿರಲಿ, ಬೇರೆಯವರೇ ಆಗಿದ್ದರೂ ಸರಿ ಎಂದು ಸದಾನಂದಗೌಡ ಹೇಳಿದರು.