ಒಳಮೀಸಲಾತಿ ದಲಿತ ಸಚಿವರು, ಶಾಸಕರ ಸಭೆ

ಬೆಂಗಳೂರು, ಆ. ೩- ಒಳಮೀಸಲಾತಿ ಅನುಷ್ಠಾನ, ದಲಿತ ಸಿಎಂ ಸೇರಿದಂತೆ ಪರಿಶಿಷ್ಟ ಸಮುದಾಯಗಳಿಗೆ ಸೇರಿದ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಕಾಂಗ್ರೆಸ್‌ನ ದಲಿತ ಸಮುದಾಯದ ಸಚಿವರು ಹಾಗೂ ಶಾಸಕರುಗಳ ಇಂದು ಸಭೆ ಸೇರಲಿದ್ದಾರೆ.


ಗೃಹ ಸಚಿವ ಡಾ. ಜಿ. ಪರಮೇಶ್ವರ್ ರವರ ಅಧಿಕೃತ ನಿವಾಸದಲ್ಲಿ ಇಂದು ರಾತ್ರಿ ದಲಿತ ಸಮುದಾಯದ ಸಚಿವರು ಹಾಗೂ ಕಾಂಗ್ರೆಸ್‌ನ ದಲಿತ ಶಾಸಕರುಗಳ ಔತಣಕೂಟ ಸಭೆ ನಡೆಯಲಿದೆ.


ಗೃಹ ಸಚಿವ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ಈ ಸಭೆ ನಡೆಯಲಿದ್ದು, ಒಳಮೀಸಲಾತಿಗೆ ಸಂಬಂಧಿಸಿದಂತೆ ರಚಿಸಲಾಗಿರುವ ನ್ಯಾ. ನಾಗಮೋಹನ್‌ದಾಸ್ ರವರ ನೇತೃತ್ವದ ಆಯೋಗ ಸದ್ಯದಲ್ಲೇ ವರದಿ ಸಲ್ಲಿಸಲಿರುವ ಹಿನ್ನೆಲೆಯಲ್ಲಿ ಈ ಸಭೆಯನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕರೆದಿದ್ದಾರೆ.


ಪರಿಶಿಷ್ಟ ಸಮುದಾಯದ ಒಳ ಮೀಸಲಾತಿ ಜಾರಿಗೂ ಮುನ್ನ ಪರಿಶಿಷ್ಟ ವರ್ಗದ ಎಡಗೈ ಮತ್ತು ಬಲಗೈ ಸಮುದಾಯಗಳ ಭಿನ್ನಾಭಿಪ್ರಾಯಗಳು, ಆಕ್ಷೇಪ, ಅಸಮಾಧಾನಗಳನ್ನು ಸರಿಪಡಿಸಿಕೊಳ್ಳಲು ಈ ಸಭೆ ಕರೆಯಲಾಗಿದೆ ಎಂದು ಹೇಳಲಾಗಿದೆ.


ಒಳಮೀಸಲಾತಿ ಜಾರಿ ವಿಳಂಬವಾಗುತ್ತಿರುವುದಕ್ಕೆ ಮಾದಿಗ ಸಮುದಾಯ ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಪರಸ್ಪರ ಚರ್ಚೆ ಮೂಲಕ ಎಲ್ಲವನ್ನು ಬಗೆಹರಿಸಿಕೊಳ್ಳಲು ದಲಿತ ಸಮುದಾಯದ ಸಚಿವರು ಹಾಗೂ ಶಾಸಕರುಗಳ ಸಭೆ ಕರೆದಿದ್ದಾರೆ ಎನ್ನಲಾಗಿದೆ.
ಈ ಸಭೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಕೇಳಿ ಬರುತ್ತಿರುವ ದಲಿತ ಸಿಎಂ ವಿಚಾರ, ದಲಿತರ ಕಲ್ಯಾಣಕ್ಕೆ ಮೀಸಲಾದ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸುತ್ತಿರುವ ವಿಚಾರ ಎಲ್ಲವೂ ಚರ್ಚೆಯಾಗಲಿದೆ ಎಂದು ಹೇಳಲಾಗಿದೆ.


ಗೃಹ ಸಚಿವ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಪಾಲ್ಗೊಳ್ಳುವಂತೆ ಎಲ್ಲ ದಲಿತ ಸಚಿವರುಗಳು ಹಾಗೂ ಶಾಸಕರುಗಳಿಗೆ ಖುದ್ದು ಗೃಹ ಸಚಿವರೇ ದೂರವಾಣಿ ಕರೆ ಮಾಡಿ ಆಹ್ವಾನ ನೀಡಿದ್ದಾರೆ.


ಇಂದಿನ ಸಭೆಯಲ್ಲಿ ದಲಿತ ಸಮುದಾಯಕ್ಕೆ ಸಚಿವರುಗಳಾದ ಡಾ. ಹೆಚ್.ಸಿ. ಮಹದೇವಪ್ಪ. ಸತೀಶ್ ಜಾರಕಿಹೊಳಿ, ಪ್ರಿಯಾಂಕ ಖರ್ಗೆ, ಕೆ.ಎಚ್. ಮುನಿಯಪ್ಪ, ಆರ್.ಬಿ. ತಿಮ್ಮಾಪುರ, ಕೆ.ಎನ್. ರಾಜಣ್ಣ ಇವರುಗಳು ಪಾಲ್ಗೊಳ್ಳಲಿದ್ದು, ಕಾಂಗ್ರೆಸ್‌ನ ದಲಿತ ಸಮುದಾಯದ ಬಹುತೇಕ ಶಾಸಕರುಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.


ಈ ಹಿಂದೆ ಡಾ. ಜಿ. ಪರಮೇಶ್ವರ್ ರವರ ನೇತೃತ್ವದಲ್ಲಿ ದಲಿತ ಸಚಿವರುಗಳ ಉಪಹಾರ ಸಭೆ, ಡಿನ್ನರ್ ಸಭೆಗಳ ಬಗ್ಗೆ ಪಕ್ಷದಲ್ಲಿ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಹೈಕಮಾಂಡ್ ಇದಕ್ಕೆ ತಡೆ ಹಾಕಿತ್ತು. ಬಹುದಿನದ ನಂತರ ಮತ್ತೆ ದಲಿತ ಸಚಿವರ ಹಾಗೂ ಶಾಸಕರ ಡಿನ್ನರ್ ಮೀಟಿಂಗ್ ಇಂದು ನಡೆಯುತ್ತಿದೆ.