
ಬೀದರ್:ಡಿ.28:ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ರಾಯಚೂರು ವಲಯದ 14 ವರ್ಷದ ಒಳಗಿನ ಬಾಲಕರ ಅಂತರ ಜಿಲ್ಲಾ ಕ್ರಿಕೆಟ್ ಪಂದ್ಯಾವಳಿ ಪ್ರಯುಕ್ತ ನಗರದಲ್ಲಿ ಶನಿವಾರ ನಡೆದ ಪಂದ್ಯಗಳಲ್ಲಿ ವಿಜಯಪುರ ಹಾಗೂ ಕಲಬುರಗಿ ತಂಡ ಜಯಭೇರಿ ಬಾರಿಸಿದವು.
ವಿಜಯಪುರ ತಂಡವು ಬೀದರ್ ತಂಡವನ್ನು ಹಾಗೂ ಕಲಬುರಗಿ ತಂಡವು ಬಾಗಲಕೋಟೆ ತಂಡವನ್ನು ಸೋಲಿಸಿತು.
ಜಿಲ್ಲಾ ಪೆÇಲೀಸ್ ಕವಾಯತು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ವಿಜಯಪುರ ತಂಡ 35.1 ಓವರ್‍ಗಳಲ್ಲಿ ತನ್ನೆಲ್ಲ ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು.
ಪವನ್ ದೀಪ್ 33 ಎಸೆತಗಳಲ್ಲಿ ಆಕರ್ಷಕ 48 ರನ್ ಸಿಡಿಸಿದರು. ರಕ್ಷಣಾತ್ಮಕವಾಗಿ ಆಡಿದ ವಿಕ್ರಮ್ 58 ಎಸೆತಗಳಲ್ಲಿ 43 ರನ್ ಬಾರಿಸಿದರು.
ಬೀದರ್ ತಂಡದ ಸಾಯಿ ಗುರು 4.1 ಓವರ್‍ಗಳಲ್ಲಿ 18 ರನ್‍ಗೆ ಮೂರು, ಸಾಕೀಬ್ 7 ಓವರ್‍ಗಳಲ್ಲಿ 39 ರನ್‍ಗೆ ಮೂರು ವಿಕೆಟ್ ಪತನಗೊಳಿಸಿದರು.
ನಂತರ ಬ್ಯಾಟಿಂಗ್‍ಗೆ ಇಳಿದ ಬೀದರ್ ತಂಡ 27.4 ಓವರ್‍ಗಳಲ್ಲಿ 92 ರನ್‍ಗೆ ಆಲೌಟ್ ಆಗಿ, ಸೋಲೊಪ್ಪಿಕೊಂಡಿತು.
ಆದಿತ್ಯ 41 ಎಸೆತಗಳಲ್ಲಿ 31 ರನ್ ಗಳಿಸಿ ತಂಡದ ಆಟಗಾರರಲ್ಲಿ ಭರವಸೆ ಮೂಡಿಸಿದರಾದರೂ, ತಂಡವನ್ನು ಸೋಲಿನಿಂದ ಪಾರು ಮಾಡಲು ಅವರಿಗೆ ಸಾಧ್ಯವಾಗಲಿಲ್ಲ.
ಎದುರಾಳಿ ತಂಡದ ಹೃಷಿಕೇಶ ಐದು ಓವರ್‍ಗಳಲ್ಲಿ 18 ರನ್‍ಗೆ ನಾಲ್ಕು ವಿಕೆಟ್, ರಿವಿಕ್ 4.4 ಓವರ್‍ಗಳಲ್ಲಿ 16 ರನ್‍ಗೆ ಎರಡು ವಿಕೆಟ್ ಹಾಗೂ ವಿವೇಕಾನಂದ ಬಿ. 4 ಓವರ್‍ಗಳಲ್ಲಿ 16 ರನ್‍ಗೆ ಎರಡು ವಿಕೆಟ್ ಪಡೆದರು.
ವಿಜಯಪುರ ತಂಡ 109 ರನ್‍ಗಳಿಂದ ಗೆಲುವು ಸಾಧಿಸಿತು.
ಉದಯಕುಮಾರ ಡಿ. ಹಾಗೂ ಸಿದ್ರಾಮ ಜಮಾದಾರ್ ಅಂಪೈರ್ ಮತ್ತು ಸಂಜೀವ್ ರಾಠೋಡ್ ಸ್ಕೋರರ್ ಆಗಿದ್ದರು.
ನೆಹರೂ ಕ್ರೀಡಾಂಗಣದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಗಲಕೋಟೆ ತಂಡವು ನಿಗದಿತ 50 ಓವರ್‍ಗಳಲ್ಲಿ 194 ರನ್‍ಗೆ ಆಲ್‍ಔಟ್ ಆಯಿತು.
ತಂಡದ ಅಕ್ಷಯಕುಮಾರ 115 ಎಸೆತಗಳಲ್ಲಿ 83 ರನ್ ಹಾಗೂ ಪ್ರೀತಂ 103 ಎಸೆತಗಳಲ್ಲಿ 37 ರನ್ ಗಳಿಸಿದರು.
ಕಲಬುರಗಿ ತಂಡದ ಪ್ರಣವ್ ಪಿ. 6 ಓವರ್‍ಗಳಲ್ಲಿ 29 ರನ್‍ಗೆ ಮೂರು ವಿಕೆಟ್ ಪಡೆದರು.
ನಂತರ ಬ್ಯಾಟ್ ಮಾಡಿದ ಕಲಬುರಗಿ ತಂಡ 26.2 ಓವರ್‍ಗಳಲ್ಲೇ 199 ರನ್ ಗಳಿಸಿ ವಿಜಯ ಪತಾಕೆ ಹಾರಿಸಿತು.
ಪ್ರಜ್ವಲ್ 64 ಎಸೆತಗಳಲ್ಲಿ 59 ರನ್ ಹಾಗೂ ಶ್ರೀಕಾಂತ 19 ಎಸೆತಗಳಲ್ಲಿ ಅಬ್ಬರದ 31 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಬಾಗಲಕೋಟೆ ತಂಡದ ಸಮೃದ್ಧ 6.2 ಓವರ್‍ಗಳಲ್ಲಿ 50 ರನ್‍ಗೆ ಒಂದು ವಿಕೆಟ್ ಮತ್ತು ಆರ್. ದೀಕ್ಷಿತ್ 5 ಓವರ್‍ಗಳಲ್ಲಿ 41 ರನ್‍ಗೆ ಒಂದು ವಿಕೆಟ್ ಪಡೆದರು.
ಬಾಗಣ್ಣ ಮಡಿವಾಳ, ನರೇಂದ್ರ ಎಸ್.ಎಂ ಅಪೈರ್ ಹಾಗೂ ಸಂತೋಷಕುಮಾರ ಪಾಟೀಲ ಸ್ಕೋರರ್ ಆಗಿದ್ದರು.
ಪಂದ್ಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಬಕಾರಿ ಉಪ ಆಯುಕ್ತ ಆನಂದ ಉಕ್ಕಲಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ರಾಯಚೂರು ವಲಯ ಸಂಚಾಲಕ ಕುಶಾಲ್ ಪಾಟೀಲ ಗಾದಗಿ, ಜಿಲ್ಲಾ ಸಂಯೋಜಕ ಸಂಜಯ್ ಜಾಧವ್ ಹಾಗೂ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಅನಿಲಕುಮಾರ ದೇಶಮುಖ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.























