ಬೀದರ್:ಅ31: ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಅಂತರ ಕಾಲೇಜುಮಟ್ಟದ ಬ್ಯಾಸ್ಕೆಟ್‍ಬಾಲ್ ಟೂರ್ನಿಯಲ್ಲಿ ವಿಜಯಪುರದ ಬಿ.ಎಲ್.ಡಿ. ಸಂಸ್ಥೆಯ ಸಂಚಾಲಿತ ಎಸ್.ಬಿ.ಎಸ್ ಮಹಿಳಾ ಕಾಲೇಜು ತಂಡ ಪ್ರಥಮ ಸ್ಥಾನ ಗಳಿಸಿತು.
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ತಂಡ ದ್ವಿತೀಯ ಸ್ಥಾನ ಪಡೆದರೆ, ಧಾರವಾಡದ ಶ್ರೀ ಸತ್ಯಸಾಯಿ ಮಹಿಳಾ ಕಾಲೇಜು ತಂಡ ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಆರ್.ವಿ. ಗಂಗಶೆಟ್ಟಿ ಅವರು, ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ವಿವಿಧ ಸ್ಪರ್ಧೆಗಳಲ್ಲಿ ಪ್ರತಿಭೆ ಪ್ರದರ್ಶಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಪೆÇ್ರ. ಮನೋಜಕುಮಾರ ಅವರು, ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಚೆನ್ನಾಗಿರಲಿದೆ. ವಿದ್ಯಾರ್ಥಿನಿಯರು ಮೊಬೈಲ್‍ನಿಂದ ದೂರ ಉಳಿದು, ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಸಲಹೆ ಮಾಡಿದರು.
ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ರವಿ ನಾಯಕ್ ಅವರು, ಕ್ರೀಡೆಗಳು ಮನಸ್ಸಿಗೆ ಹೊಸ ಚೈತನ್ಯ ನೀಡುತ್ತವೆ ಎಂದು ತಿಳಿಸಿದರು.
ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥೆ ವಿಜಯಲಕ್ಷ್ಮಿ ನಿರೂಪಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮನೋಹರ ಘಾಳೆಪ್ಪ ಸ್ವಾಗತಿಸಿದರು. ಕಾಲೇಜಿನ ಸಿಬ್ಬಂದಿ ಕಾರ್ಯದರ್ಶಿ ಡಾ. ವಿದ್ಯಾ ಪಾಟೀಲ ವಂದಿಸಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ವಿಜಯಪುರದ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವತಿಯಿಂದ ಟೂರ್ನಿ ಹಮ್ಮಿಕೊಳ್ಳಲಾಗಿತ್ತು.























