Home ಜಿಲ್ಲೆ ಪ್ರಕೃತಿ ವಿಕೋಪದ ನಷ್ಟ ತಗ್ಗಿಸಲು ವಿಮೆ ಅಗತ್ಯ

ಪ್ರಕೃತಿ ವಿಕೋಪದ ನಷ್ಟ ತಗ್ಗಿಸಲು ವಿಮೆ ಅಗತ್ಯ

ಯಾದಗಿರಿ:ಜೂ.೨೧: ಮಳೆ-ಬೆಳೆಗಳ ಅನಿಶ್ಚಿತತೆ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಪ್ರಕೃತಿ ವಿಕೋಪಗಳಿಂದ ಉಂಟಾಗುವ ಬೆಳೆ ನಷ್ಟದಿಂದ ರೈತರನ್ನು ರಕ್ಷಿಸಲು ಬೆಳೆ ವಿಮೆ ಅತ್ಯಂತ ಪ್ರಮುಖವಾಗಿದ್ದು, ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಎಂದು ಕರ್ನಾಟಕ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಹಾಗೂ ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಳ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಮುಂಗಾರು ಆರಂಭವಾಗಿದ್ದು, ರೈತರು ಬಿತ್ತನೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದರೆ ಅತಿವೃಷ್ಟಿ, ಅನಾವೃಷ್ಟಿ, ಬೆಳೆ ರೋಗ, ಕೀಟಬಾಧೆ, ಆಲಿಕಲ್ಲು ಮಳೆ ಸೇರಿದಂತೆ ವಿವಿಧ ಪ್ರಕೃತಿ ವಿಕೋಪಗಳು ಯಾವಾಗ ಸಂಭವಿಸುತ್ತವೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಇಂತಹ ಸಂದರ್ಭಗಳಲ್ಲಿ ರೈತರ ಹಲವು ತಿಂಗಳ ಪರಿಶ್ರಮಕ್ಕೆ ಹೊಡೆತ ಬೀಳುತ್ತದೆ ಎಂದು ತಿಳಿಸಿದ್ದಾರೆ.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿಕೊಳ್ಳುವುದು ರೈತರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಪ್ರಮುಖ ಮಾರ್ಗವಾಗಿದೆ. ಬೆಳೆ ಹಾನಿಯಾದ ಸಂದರ್ಭದಲ್ಲಿ ನಷ್ಟವನ್ನು ಭಾಗಶಃ ತುಂಬಿಕೊಳ್ಳಲು ವಿಮೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.

ರೈತರು ತಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಸಿಎಸ್‌ಸಿ ಕೇಂದ್ರ ಅಥವಾ ಬ್ಯಾಂಕ್‌ಗಳಿಗೆ ತೆರಳಿ ಭೂಮಿಯ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಹಾಗೂ ಬಿತ್ತನೆ ದೃಢೀಕರಣ ಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ನೀಡಿ ನಿಗದಿತ ಅವಧಿಯೊಳಗೆ ಬೆಳೆ ವಿಮೆ ನೋಂದಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಮುಂಗಾರು ಹಂಗಾಮಿನ ಬೆಳೆಗಳಿಗೆ ವಿಮೆ ಮಾಡಿಸಲು ಜುಲೈ ೩೧ ಕೊನೆಯ ದಿನವಾಗಿದ್ದು, ರೈತರು ಕೊನೆಯ ದಿನದವರೆಗೆ ಕಾಯದೆ ತಕ್ಷಣವೇ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ರಾಚನಗೌಡ ಮುದ್ನಾಳ ತಿಳಿಸಿದ್ದಾರೆ.

“ಬೆಳೆ ವಿಮೆಗೆ ರೈತರು ಒಟ್ಟು ಪ್ರೀಮಿಯಂ ಮೊತ್ತದಲ್ಲಿ ಶೇ.೨ರಷ್ಟು ಮಾತ್ರ ಪಾವತಿಸಬೇಕಾಗುತ್ತದೆ. ಉಳಿದ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭರಿಸುತ್ತವೆ. ಕಡಿಮೆ ವೆಚ್ಚದಲ್ಲಿ ರೈತರಿಗೆ ದೊಡ್ಡ ಮಟ್ಟದ ರಕ್ಷಣೆ ದೊರೆಯಲಿದೆ. ಸಂಕಷ್ಟ ಬಂದ ನಂತರ ಪರಿಹಾರಕ್ಕಾಗಿ ಕಾಯುವುದಕ್ಕಿಂತ ಮುಂಚಿತವಾಗಿ ವಿಮೆ ಮಾಡಿಸಿಕೊಳ್ಳುವುದು ಉತ್ತಮ” ಎಂದು ಅವರು ಹೇಳಿದ್ದಾರೆ.

ಕೃಷಿ ಇಲಾಖೆ ಅಧಿಕಾರಿಗಳು, ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರೈತರಿಗೆ ಬೆಳೆ ವಿಮೆಯ ಮಹತ್ವದ ಕುರಿತು ಹೆಚ್ಚಿನ ಜಾಗೃತಿ ಮೂಡಿಸಿ, ಅರ್ಹ ಎಲ್ಲಾ ರೈತರು ಯೋಜನೆಯ ಪ್ರಯೋಜನ ಪಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಯಾವುದೇ ಮಧ್ಯವರ್ತಿಗಳಿಗೆ ಹಣ ನೀಡದೆ ರೈತರು ನೇರವಾಗಿ ಅಧಿಕೃತ ಕೇಂದ್ರಗಳಿಗೆ ತೆರಳಿ ಬೆಳೆ ವಿಮೆ ನೋಂದಾಯಿಸಿಕೊಳ್ಳಬೇಕು ಎಂದು ರಾಚನಗೌಡ ಮುದ್ನಾಳ ಕಿವಿಮಾತು ಹೇಳಿದ್ದಾರೆ.