ಸಂವಿಧಾನ, ಡಾ. ಅಂಬೇಡ್ಕರ್ ಹಾಗೂ ರಾಷ್ಟ್ರಧ್ವಜಕ್ಕೆ ಅಪಮಾನ: ತಕ್ಷಣ ಕಠಿಣ ಕಾನೂನು ಕ್ರಮಕ್ಕೆ ಡಿ.ವಿ.ಪಿ ಆಗ್ರಹ

ಸಂಜೆವಾಣಿ ವಾರ್ತೆ,
ವಿಜಯಪುರ, ಜ. ೨೮: ಇಲ್ಲಿನ ಜಲನಗರದ ಬಿ.ಡಿ.ಎ ಖಾಲಿ ಜಾಗದಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರತ್ಥಾನ ಹಿಂದೂ ಸಮ್ಮೇಳನದಲ್ಲಿ ಆರ್. ಎಸ್. ಎಸ್. ಮುಖಂಡನೊಬ್ಬ “ಈ ದೇಶ ಎಂದರೆ ಸಂವಿಧಾನವಲ್ಲ, ರಾಷ್ಟ್ರಧ್ವಜವಲ್ಲ, ಕೇವಲ ಅಂಬೇಡ್ಕರ್ ಅಲ್ಲ” ಎಂಬ ಅತಿರೇಕದ, ಅಪಮಾನಕಾರಕ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯವಾಗಿದೆ. ಈ ಹೇಳಿಕೆ ದೇಶದ ಸಂವಿಧಾನ, ರಾಷ್ಟ್ರಧ್ವಜ ಹಾಗೂ ಈ ದೇಶದ ಮಹಾನ್ ನಾಯಕ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ನೇರವಾಗಿ ಅವಮಾನ ಮಾಡುವಂತಿದ್ದು, ದೇಶದ ಏಕತೆ-ಅಖಂಡತೆಗೆ ಧಕ್ಕೆ ತರುವ ದೇಶದ್ರೋಹಿ ಮನೋಭಾವವನ್ನು ತೋರಿಸುತ್ತದೆ. ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದಲಿತ ವಿದ್ಯಾರ್ಥಿ ಪರಿಷತ್ ಮುಖಂಡರು ಜಿಲ್ಲಾಧಿಕಾರಿ ಯವರಿಗೆ ಮನವಿ ಮಾಡಿದ್ದಾರೆ.
ಡಿ ವಿ ಪಿ ಜಿಲ್ಲಾ ಸಂಚಾಲಕ ಅಕ್ಷಯಕುಮಾರ ಅಜಮನಿ ಮಾತನಾಡಿ, ಆರ್. ಎಸ್. ಎಸ್. ಮುಖಂಡರು ಸಂವಿಧಾನ, ಅಂಬೇಡ್ಕರ್ ಹಾಗೂ ರಾಷ್ಟ್ರಧ್ವಜದ ಕುರಿತು ಈ ರೀತಿಯ ಅಗೌರವಪೂರ್ಣ ಮಾತುಗಳನ್ನು ಆಡುವ ಮೂಲಕ ಸಮಸ್ತ ದೇಶದ ಜನತೆಗೆ, ವಿಶೇಷವಾಗಿ ಅಂಬೇಡ್ಕರ್ ಅನುಯಾಯಿಗಳಿಗೆ ತೀವ್ರ ನೋವು ಉಂಟು ಮಾಡಿದ್ದಾರೆ. ಉದ್ದೇಶ ಪೂರ್ವಕವಾಗಿ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಹಾಳುಮಾಡುವ ಪ್ರಯತ್ನ ಮಾಡಿರುವುದು ಗಂಭೀರ ಅಪರಾಧವಾಗಿದೆ ಎಂದು ತಿಳಿಸಿದ್ದಾರೆ.
ಆದ್ದರಿಂದ, ಈ ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಂಡವರು ಹಾಗೂ ದೇಶಕ್ಕೆ ಮತ್ತು ದೇಶದ ಮಹಾನ್ ನಾಯಕರಿಗೆ ಅಪಮಾನವಾಗುವ ರೀತಿಯಲ್ಲಿ ಭಾಷಣ ಮಾಡಿದವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಡಿ.ವಿ.ಪಿ ಜಿಲ್ಲಾ ಆಡಳಿತವನ್ನು ಬಲವಾಗಿ ಆಗ್ರಹಿಸುತ್ತದೆ ಎಂದಿದ್ದಾರೆ.
ಜಿಲ್ಲಾಡಳಿತ ಈ ವಿಚಾರದಲ್ಲಿ ತಕ್ಷಣ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ಜಿಲ್ಲೆಯ ಪ್ರಗತಿಪರ, ದಲಿತ, ಕನ್ನಡಪರ, ರೈತ, ಕಾರ್ಮಿಕ, ವಿದ್ಯಾರ್ಥಿ ಹಾಗೂ ಯುವಜನಪರ ಎಲ್ಲಾ ಸಂಘಟನೆಗಳ ನೇತೃತ್ವದಲ್ಲಿ ವ್ಯಾಪಕ ಹೋರಾಟ ನಡೆಸಲಾಗುವುದು ಎಂಬುದನ್ನು ಎಚ್ಚರಿಸುತ್ತೇವೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಮುಖಂಡರಾದ ಮಾದೇಶ ಚಲವಾದಿ, ಪ್ರತಾಪ, ಸಿದ್ದು, ಮಹಾಂತೇಶ, ಹುಚ್ಚಪ್ಪ, ಸಿದ್ದಾರ್ಥ ಮುಂತಾದವರು ಭಾಗಿಯಾಗಿದ್ದರು.