
ಚಿಕ್ಕನಾಯಕನಹಳ್ಳಿ, ಜೂ. ೬- ಕ್ಷೇತ್ರದ ಸಮಗ್ರ ಅಭಿವೃದ್ದಿ ಗುರಿಯಾಗಿದ್ದು ಅದರಲ್ಲೂ ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಲಾಗುತ್ತಿದ್ದು ಸರಿಯಾದ ಮಾನದಂಡಗಳನ್ನು ಬಳಸಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.
ತಾಲ್ಲೂಕಿನ ಕಂದಿಕೆರೆ ಹೋಬಳಿಯ ಸಾಲ್ಕಟ್ಟೆ ಕ್ರಾಸ್‌ನಿಂದ ಬೆಳ್ಳಾರ ಗೇಟ್ ಸಂಪರ್ಕಿಸುವ ರಸ್ತೆಯ ಕಾಮಗಾರಿಯನ್ನು ತಿಮ್ಮನಹಳ್ಳಿಯ ಕಣಿವೆ ಕ್ರಾಸ್‌ನಲ್ಲಿ ಪರೀಶಿಲಿಸಿ ಮಾತನಾಡಿದ ಅವರು ಕಣಿವೆ ಕ್ರಾಸ್‌ನಿಂದ ಸಾಲ್ಕಟ್ಟೆ ಕ್ರಾಸ್‌ವರೆಗೆ ಸುಮಾರು ೩೩ ಕೋಟಿ ವೆಚ್ಚದಲ್ಲಿ ೭ ಮೀಟರ್ ಅಗಲ ಹಾಗೂ ೧೦ ಕಿ.ಮೀ ಉದ್ದದ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ಉತ್ತಮವಾದ ಗುಣಮಟ್ಟದ ಕಾಮಗಾರಿ ನಡೆಯುತ್ತಿದೆ ಎಂದರು.
ಸಾಜನಿಕರು ಕಾಮಾಗಾರಿ ವೇಳೆ ಓಡಾಡಲು ಸ್ವಲ್ಪ ಕಷ್ಟವಾದರು ಸಹಿಸಿಕೊಂಡರೆ ಮುಂದಿನ ದಿನಗಳಲ್ಲಿ ಉತ್ತಮವಾದ ರಸ್ತೆಯಾಗುತ್ತದೆ. ಇದು ನಮ್ಮ ತಾಲ್ಲೂಕಿನಿಂದ ಸಿರಾ ರಸ್ತೆಯನ್ನು ಸಂಪರ್ಕಿಸುವ ರಸ್ತೆಯಾಗಿದ್ದು ಗ್ರಾಮೀಣ ಭಾಗದ ಜನರಿಗೆ ಉತ್ತಮ ಹಾಗೂ ಶಾಶ್ವತ ರಸ್ತೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗುತ್ತಿರುವ ಈ ಮಹತ್ವದ ಕಾಮಗಾರಿಯ ಪ್ರತಿಯೊಂದು ಹಂತವನ್ನು ಸೂಕ್ಷ್ಮವಾಗಿ ಅವಲೋಕಿಸಿ, ನಿಗದಿತ ಗುಣಮಟ್ಟದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ,ಈ ರಸ್ತೆ ನಿರ್ಮಾಣ ಪೂರ್ಣಗೊಂಡ ಬಳಿಕ ಸಾರ್ವಜನಿಕರಿಗೆ ಸುಗಮ ಮತ್ತು ಸುರಕ್ಷಿತ ಸಂಚಾರ ವ್ಯವಸ್ಥೆ ಲಭ್ಯವಾಗಲಿದ್ದು, ರೈತರು, ವಿದ್ಯಾರ್ಥಿಗಳು ಹಾಗೂ ವಾಹನ ಸವಾರರಿಗೆ ಹೆಚ್ಚಿನ ಅನುಕೂಲವಾಗಲಿದೆ. ಜತೆಗೆ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಹೊಸ ವೇಗ ದೊರೆಯಲಿದ್ದು, ಗ್ರಾಮೀಣ ಸಂಪರ್ಕ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಸಹಾಯಕ ಇಂಜಿನಿಯರ್ ಮನೋಹರ್ ಬಿ.ಜಿ ಸೇರಿದಂತೆ ಗುತ್ತಿಗೆದಾರರು ಉಪಸ್ಥಿತರಿದ್ದರು.


































