Home ಜಿಲ್ಲೆ ಬೆಂಗಳೂರು ನಾಗರಿಕರ ಸಮಸ್ಯೆ ತ್ವರಿತ ಇತ್ಯರ್ಥಕ್ಕೆ ಸೂಚನೆ

ನಾಗರಿಕರ ಸಮಸ್ಯೆ ತ್ವರಿತ ಇತ್ಯರ್ಥಕ್ಕೆ ಸೂಚನೆ

ಬೆಂಗಳೂರು, ಮೇ ೧೫-ನಾಗರಿಕರಿಂದ ಬಂದ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಿ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಬೇಕು ಎಂದು ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಮೃತಹಳ್ಳಿ ಮುಖ್ಯ ರಸ್ತೆಯಲ್ಲಿರುವ ನಗರ ಪಾಲಿಕೆಯ ಆಯುಕ್ತರ ಕಚೇರಿಯಲ್ಲಿ ಇಂದು ಬೆಳಗ್ಗೆ ನಡೆದ “ಫೋನ್‌ಇನ್ ಕಾರ್ಯಕ್ರಮ”ದಲ್ಲಿ ವಿವಿಧ ವಾರ್ಡ್‌ಗಳ ನಾಗರಿಕರಿಂದ ಬಂದ ಅಹವಾಲುಗಳನ್ನು ಆಯುಕ್ತರು ನೇರವಾಗಿ ಆಲಿಸಿದರು. ರಸ್ತೆ ನಿರ್ವಹಣೆ, ಘನತ್ಯಾಜ್ಯ ವಿಲೇವಾರಿ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಹೆಚ್ಚಿನ ದೂರುಗಳು ದಾಖಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.

ಇಂದಿನ ಕಾರ್ಯಕ್ರಮದಲ್ಲಿ ಒಟ್ಟು ೫೪ ಕರೆಗಳು ಸ್ವೀಕರಿಸಲ್ಪಟ್ಟು ೬೪ ಅಹವಾಲುಗಳು ದಾಖಲಾಗಿವೆ. ರಸ್ತೆ ಹಾಗೂ ಕಸದ ಸಮಸ್ಯೆಗಳ ಜೊತೆಗೆ ಅರಣ್ಯ, ಇ-ಖಾತಾ ಸೇವೆ, ವಿದ್ಯುತ್, ಉದ್ಯಾನ ಮತ್ತು ಇತರೆ ವಿಭಾಗಗಳಿಗೆ ಸಂಬಂಧಿಸಿದ ದೂರುಗಳೂ ಬಂದಿವೆ.
ಸೆಪ್ಟೆಂಬರ್ ೨೬ರಿಂದ ಆರಂಭಗೊಂಡಿರುವ ಈ ಫೋನ್‌ಇನ್ ಕಾರ್ಯಕ್ರಮದಲ್ಲಿ ಕಳೆದ ೩೩ ವಾರಗಳಲ್ಲಿ ಒಟ್ಟು ೧೪೮೪ ಕರೆಗಳು ಬಂದಿದ್ದು, ೧೯೦೫ ಅಹವಾಲುಗಳು ದಾಖಲಾಗಿವೆ. ಅವುಗಳಲ್ಲಿ ೧೩೮೯ ಅಹವಾಲುಗಳಿಗೆ ಕ್ರಮ ಕೈಗೊಂಡು ಇತ್ಯರ್ಥಪಡಿಸಲಾಗಿದೆ. ಇನ್ನೂ ೩೬೦ ಅಹವಾಲುಗಳು ಬಾಕಿ ಇದ್ದು, ಅವುಗಳನ್ನು ಶೀಘ್ರ ಪರಿಹರಿಸಲು ಸೂಚಿಸಲಾಗಿದೆ. ದೀರ್ಘಾವಧಿ ಪರಿಹಾರ ಅಗತ್ಯವಿರುವ ಕೆಲವು ಸಮಸ್ಯೆಗಳಿಗೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿ ಶುಕ್ರವಾರ ನಡೆಯುವ ಈ ಫೋನ್?ಇನ್ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ನಾಗರಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವ ಉದ್ದೇಶದಿಂದ ಮುಂದುವರಿಸಲಾಗುವುದು ಎಂದು ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅಭಿಯಂತರ ರಾಘವೇಂದ್ರ ಪ್ರಸಾದ್, ಅಧೀಕ್ಷಕ ಹಾಗೂ ಕಾರ್ಯಪಾಲಕ ಅಭಿಯಂತರರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.