ಜೂ.೨೧ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆಅಗತ್ಯ ಸಿದ್ಧತೆಗೆ ಸೂಚನೆ: ಎಡಿಸಿ ಶಿವಕುಮಾರ ಶೀಲವಂತ

ಬೀದರ, ಜೂ.೧೮: ಇದೇ ಜೂನ್.೨೧ ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು “ಒಂದು ಭೂಮಿ, ಒಂದು ಆರೋಗ್ಯ” ಎಂಬ ಧ್ಯೇಯ ವಾಕ್ಯದೊಂದಿಗೆ ಆಚಾರಿಸಲಾಗುತ್ತಿದ್ದು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಜೂನ್.೧೩ ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ೧೧ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಜೂನ್.೨೧ ರಂದು ಬೆಳಿಗ್ಗೆ ೬:೩೦ ರಿಂದ ೮ ಗಂಟೆಯವರೆಗೆ ನಗರದ ಕೋಟೆ ಆವರಣದಲ್ಲಿ ಕಾರ್ಯಕ್ರಮ ಜರುಗುತ್ತದೆ ಎಂದು ತಿಳಿಸಿದರು. ಹೈಸ್ಕೂಲ್, ಪಿಯುಸಿ, ಪದವಿ ಸೇರಿ ೫೦೦ ವಿದ್ಯಾರ್ಥಿಗಳು ಭಾಗವಹಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಎನ್‌ಸಿಸಿ, ಸ್ಕೌಟ್ಸ್ ಅಂಡ್ ಗೈಡ್ಸ್, ಬ್ರೀಮ್ಸ್ ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಕೂಡ ಭಾಗವಹಿಸುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು.
ಪೋಲಿಸ್ ಇಲಾಖೆ ವತಿಯಿಂದ ಬಂದೋಬಸ್ತ್ ನೀಡಲಾಗುವುದು ಹಾಗೂ ನಗರಸಭೆ ವತಿಯಿಂದ ಕುಡಿಯುವ ನೀರು, ಸ್ವಚ್ಛತೆಗೆ ಅಗತ್ಯ ಕ್ರಮಕೈಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಕಾರ್ಯಕ್ರಮದಲ್ಲಿ ಕೋವಿಡ್ ೧೯ ರ ಮಾರ್ಗ ಸೂಚಿಗಳನ್ನು ಪಾಲನೆ ಮಾಡಲಾಗುವುದು ಎಂದು ತಿಳಿಸಿದರು.
ಈ ಸಭೆಯಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಖುತಿಜಾ ಬೇಗಂ, ಸರ್ಕಾರಿ ನೌಕರರ ಸಂಘ ಬೀದರ ಜಿಲ್ಲಾ ಘಟಕದ ಅಧ್ಯಕ್ಷರಾದ ಸೋಮಶೇಖರ ಬಿರಾದಾರ, ಕ್ರಿಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕರಾದ ನಾಗರಾಜ ಮಠ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು