
ಭಾಲ್ಕಿ:ಫೆ.6: ಮಕ್ಕಳನ್ನು ಬಾಲ್ಯದಿಂದಲೇ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಬೆಳೆಸಿ ದೇಶದ ಉತ್ತಮ ನಾಗರಿಕರನ್ನಾಗಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಪಟ್ಟಣದ ಲೆಕ್ಚರ್ ಕಾಲೋನಿಯ ಖಡಕೇಶ್ವರ ಪ್ರೌಢ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಅಂತರ ಶಾಲಾಮಟ್ಟದ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ದೇಶದ ಭವಿಷ್ಯ ಆಗಿರುವ ಮಕ್ಕಳಲ್ಲಿ ಅದ್ಭುತ ಶಕ್ತಿ ಅಡಗಿರುತ್ತದೆ ಅದನ್ನು ಗುರುತಿಸುವ ಕೆಲಸ ಆಗಬೇಕು ಎಂದರು. ವಿದ್ಯಾರ್ಥಿಗಳು ಶರೀರ, ಮನಸ್ಸು ಮತ್ತು ಆತ್ಮವನ್ನು ಶುದ್ಧವಾಗಿರಿಸಿಕೊಂಡರೆ ಬದುಕು ಸುಂದರವಾಗಿ ರೂಪಗೊಳ್ಳಲು ಸಾಧ್ಯವಾಗುತ್ತದೆ. ಓದಿನ ಜತೆಗೆ ಒಂದಿಷ್ಟು ಸಮಯ ಪೂಜೆ, ಜಪ, ಧ್ಯಾನಕ್ಕೆ ಮೀಸಲಿಡಿರುವುದರಿಂದ ದೈವಿ ಶಕ್ತಿ ಹೆಚ್ಚಿಸುತ್ತದೆ.
ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ದಡ್ಡರಾಗಿರುವುದಿಲ್ಲ. ಶಿಕ್ಷಕರಾದವರೂ ಅವರಲ್ಲಿನ ಪ್ರತಿಭೆಯನ್ನು ಪತ್ತೆ ಹಚ್ಚುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ ಮಾತನಾಡಿ, ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ರಸಪ್ರಶ್ನೆ ಸ್ಪರ್ಧೆ ಅತ್ಯಂತ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಸ್ಮಾರ್ಟ್‍ವರ್ಕ್ ಮೂಲಕ ಕಲಿಕೆಯ ಮಟ್ಟವನ್ನು ಹೆಚ್ಚಿಸಿ ಕೊಳ್ಳಬೇಕು ಎಂದರು.
ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಆರಂಭಕ್ಕೆ ದಿನಗಣನೇ ಶುರುವಾಗಿದ್ದು ವಿದ್ಯಾರ್ಥಿಗಳು ಮೊಬೈಲ್, ಟಿವಿ ನೋಡುವುದನ್ನು ಕಡಿಮೆ ಮಾಡಿ ಓದಿನ ಕಡೆಗೆ ಹೆಚ್ಚಿನ ಗಮನ ನೀಡಿ ಪರೀಕ್ಷೆಯನ್ನು ಭಯಮುಕ್ತರಾಗಿ ಎದುರಿಸಿ ತಾಲೂಕಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಬೇಕು ಎಂದು ತಿಳಿಸಿದರು.
ಸಂಸ್ಥೆಯ ಕೋಶಾಧ್ಯಕ್ಷ ಪ್ರಭುರಾಜ ಧೂಪೆ, ನಿರ್ದೇಶಕ ಅಶೋಕ ಲೋಖಂಡೆ, ಸಾಫ್ಟ್‍ವೇರ್ ಎಂಜಿನಿಯರ್ ಮಹಾದೇವ ಜ್ಯೋತೆಪ್ಪ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಸುಧೀರ ನಾಯಕ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸಿಆರ್‍ಪಿ ಪ್ರಭು ಡಿಗ್ಗೆ, ಶಿಕ್ಷಕರಾದ ಉದಯಕುಮಾರ ಜೋಶಿ, ಪ್ರಕಾಶ ರುದನೂರೆ, ಅಂಜಲಿ ಜೋಶಿ, ಶುಭಂ ರಾಯವಾಡೆ ಇದ್ದರು. ಮುಖ್ಯಗುರು ಆನಂದ ಕಲ್ಯಾಣೆ ಸ್ವಾಗತಿಸಿದರು. ದಿಲೀಪ ಘಂಟೆ ನಿರೂಪಿಸಿದರು. ಜಯಪ್ರಕಾಶ ಸಹಾನೆ ವಂದಿಸಿದರು.
5 ತಂಡ ಭಾಗಿ
ಖಡಕೇಶ್ವರ ಪ್ರೌಢ ಶಾಲೆ, ಚನ್ನಬಸವೇಶ್ವರ ಗುರುಕುಲ, ಭಾಲ್ಕೇಶ್ವರ, ಸದ್ಗುರು ಮತ್ತು ಭಾತಂಬ್ರಾದ ಶಿವಯೋಗೀಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಗಳು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗಹಿಸಿದ್ದರು.
ಪಟ್ಟಣದಲ್ಲಿ ಕಳೆದ ಮುರ್ನಾಲ್ಕು ದಶಕಗಳಿಂದ ಖಡಕೇಶ್ವರ ಶಿಕ್ಷಣ ಸಂಸ್ಥೆ ಗುಣಾತ್ಮಕ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಉತ್ತಮ ಸಂಸ್ಕಾರ, ಶಿಸ್ತು ಮತ್ತು ಬದ್ಧತೆ ಮೂಲಕ ವಿಶಿಷ್ಟ ಶಿಕ್ಷಣ ನೀಡುತ್ತಿದೆ.
– ಡಾ.ಬಸವಲಿಂಗ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ
ಮಕ್ಕಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಭಯ ಹೋಗಲಾಡಿಸುವ ಆಶಯದೊಂದಿಗೆ ಕಳೆದ 5 ವರ್ಷಗಳಿಂದ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಗುತ್ತದೆ.
- ಆನಂದ ಕಲ್ಯಾಣೆ ಮುಖ್ಯಗುರುಗಳು ಖಡಕೇಶ್ವರ ಪ್ರೌಢ ಶಾಲೆ ಭಾಲ್ಕಿ



























