ರಾಜ್ಯ ಮಟ್ಟದ ಮಕ್ಕಳ ಸಂಸತ್ತಿಗೆ ಸ್ಪೂರ್ತಿ, ಸೌಜನ್ಯಾ ಆಯ್ಕೆ

ಸಂಜೆವಾಣಿ ವಾರ್ತೆ,
ವಿಜಯಪುರ,ನ.೮: ನಗರದ ಉಜ್ವಲ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆಯಲ್ಲಿ ಜಿಲ್ಲಾ ಮಟ್ಟದ ಮಕ್ಕಳ ಸಂಸತ್‌ನ್ನು ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ, ಯುನಿಸೆಪ್, ಬೆಂಗಳೂರ ಹಾಗೂ ಉಜ್ವಲ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ, ವಿಜಯಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ನ.೭ರಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ ಹಾಗರಗಿ ಅವರು ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಹವ್ಯಾಸಗಳನ್ನು ಬೆಳಸಿಕೊಂಡು ಪೌಷ್ಠಿಕ ಆಹಾರವನ್ನು ಪಡೆದು ಸಮಗ್ರವಾಗಿ ಅಭಿವೃದ್ಧಿ ಹೊಂದಬೇಕು. ವ್ಯಾಯಾಮದಿಂAದ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿ ಓದಿನ ಹಂಬಲ ಹೆಚ್ಚುತ್ತದೆ ಹಾಗೂ ಮೊಬೈಲ್‌ನ್ನು ಅವಶ್ಯಕತೆಗಿಂತ ಹೆಚ್ಚು ಬಳಸಬಾರದು. ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಜಿಲ್ಲೆಯ ಮಕ್ಕಳ ಸಮಸ್ಯೆಗಳ ಬಗ್ಗೆ ರಾಜ್ಯ ಮಟ್ಟದಲ್ಲಿ ಚರ್ಚಿಸಿ” ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಬಸಮ್ಮ ಹತ್ತರಕಿ ಅವರು ಮಾತನಾಡಿ, ಮಕ್ಕಳ ಹಕ್ಕುಗಳ ಸಂಸತ್ತು ಒಂದು ಒಳ್ಳೆಯ ಕಾರ್ಯಕ್ರಮ. ಇದು ಮಕ್ಕಳಿಗೆ ತುಂಬ ಉಪಯುಕ್ತವಾಗಿದೆ. ಮಕ್ಕಳ ರಕ್ಷಣೆಯಲ್ಲಿ ಸಂಸ್ಥೆ ಸಲ್ಲಿಸುತ್ತಿರುವ ಸೇವೆ ಅಭಿನಂದನಾರ್ಹ. ಮಕ್ಕಳು ತಮ್ಮ ಸಮಸ್ಯೆಗಳ ಬಗ್ಗೆ ಹಾಗೂ ಜಿಲ್ಲೆಯ ಮಕ್ಕಳ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಸಂಬAಧಪಟ್ಟ ಅಧಿಕಾರಿಗಳು ನಿಮ್ಮ ಬೆಂಬಲಕ್ಕೆ ಇದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಜ್ವಲ ಸಂಸ್ಥೆಯ ಅಧ್ಯಕ್ಷೆ ಗೌರಮ್ಮ ರಡ್ಡಿ ಅವರು ಮಾತನಾಡಿ, ಜ್ಞಾನಾರ್ಜನೆಗಾಗಿ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಬೇಕು ಹಾಗೂ ಸಾಧಿಸಲು ಮಕ್ಕಳಲ್ಲಿ ಛಲ ಬೇಕು ಎಂದು ತಿಳಿಸಿದರು.
ಸಂಸ್ಥೆ ೧೫ ವರ್ಷದಿಂದ ಈ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದು. ಜಿಲ್ಲೆಯ ಮಕ್ಕಳ ಸಮಸ್ಯೆಗಳ ಕುರಿತು ರಾಜ್ಯಮಟ್ಟದ ಸಂಸತ್‌ನಲ್ಲಿ ಇಂದು ಆಯ್ಕೆಯಾದ ೨ ಮಕ್ಕಳು ಸಮಸ್ಯೆಗಳ ಕುರಿತು ಚರ್ಚಿಸಬೇಕಾಗುವದೆಂದು ಹೇಳಿದರು.
ಮಧ್ಯಾಹ್ನದ ನಂತರ ಸಂಸ್ಥೆಯ ನಿರ್ದೇಶಕಿÀ ಸುನಂದಾ ತೋಳಬಂದಿ ಅವರು, ಜಿಲ್ಲೆಯ ಮಕ್ಕಳ ಸ್ಥಿತಿಗತಿ, ಮಕ್ಕಳ ಹಕ್ಕುಗಳ ಒಡಂಬಡಿಕೆಯಲ್ಲಿನ ಕಾನೂನುಗಳು, ಜಿಲ್ಲೆಯ ಲಿಂಗ ಪ್ರಮಾಣ, ಬಾಲ್ಯ ವಿವಾಹ, ಮಕ್ಕಳ ಶಾರೀರಿಕ ಬೆಳವಣಿಗೆ, ರಕ್ತ ಹೀನತೆ, ಸಂವಿದಾನ ವ್ಯವಸ್ಥೆ, ವಿಧಾನ ಸಭೆ ಮತ್ತು ವಿಧಾನ ಪರಿಷತ್‌ನ ಕಾರ್ಯಕಲಾಪಗಳು, ಜಿಲ್ಲೆಯ ಶಾಸಕರುಗಳಿಗೆ ಮಕ್ಕಳ ಬಗೆಗೆ ಇರುವ ಕಳಕಳಿ ಕುರಿತು ಮನದಟ್ಟಾಗುವಂತೆ ವಿಷಯ ಮಂಡಿಸಿದರು.
ಬಳಿಕ ಮಕ್ಕಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿ ಸಮಸ್ಯೆಗಳನ್ನು ಚರ್ಚಿಸಲು ಅವಕಾಶ ನೀಡಲಾಯಿತು. ಮಕ್ಕಳಲ್ಲಿ ಪೌಷ್ಠಿಕ ಆಹಾರದ ಕೊರತೆ, ಶೌಚಾಲಯ, ಅನಕ್ಷಸ್ಥ ಪಾಲಕರು, ಬಾಲ್ಯವಿವಾಹಕ್ಕೊಳಗಾಗುವ ಮಕ್ಕಳು, ಮಾನಸಿಕ ಅಸ್ವಸ್ಥ ಮಕ್ಕಳು, ಬಾಲಕಾರ್ಮಿಕತೆ, ಜೀತದ ಮಕ್ಕಳು, ಭಿಕ್ಷೆಬೇಡುವವರು, ಪಾಲಕರೊಂದಿಗೆ ವಲಸೆ, ಮಕ್ಕಳ ಮಾರಾಟ, ಭ್ರೂಣಹತ್ಯೆ, ಅನಾರೋಗ್ಯದಿಂದ ಬಳಲುವ ಮಕ್ಕಳು, ಅತ್ಯಾಚಾರಕ್ಕೊಳಗಾದ ಮಕ್ಕಳು, ಚಿಕ್ಕ ವಯಸ್ಸಿನಲ್ಲಿ ಮನೆ ಜವಾಬ್ದಾರಿ ಹೊರುವ ಮಕ್ಕಳ ಸಮಸ್ಯೆಗಳ ಕುರಿತು ಪ್ರತ್ಯೇಕ ನಾಲ್ಕು ಗುಂಪುಗಳಿAದ ವಿಷಯ ಮಂಡಿಸಿದರು.
ಮಕ್ಕಳು ತಮ್ಮ ಸಮಸ್ಯೆಗಳನ್ನು ಹೇಳುತ್ತಾ ಬಾಲ್ಯವಿವಾಹದಿಂದ ಮಕ್ಕಳ ಸಾವು, ಮಕ್ಕಳು ಮಕ್ಕಳ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ, ಗ್ರಾಮಗಳಿಗೆ ಬಸ್ಸುಗಳ ಕೊರತೆ, ವಿಷಯವಾರು ಶಿಕ್ಷಕರ ಕೊರತೆ, ಪ್ರಯೋಗಾಲಯ ಹಾಗೂ ಗ್ರಂಥಾಲಯಗಳಿಲ್ಲದಿರುವುದು, ಶುದ್ದ ಕುಡಿಯುವ ನೀರಿನ ಕೊರತೆ, ಬೋಧನೆ ಮಾಡದೆ ಇರುವ ಶಿಕ್ಷಕರು, ಮಕ್ಕಳಿಗೆ ಶಿಕ್ಷರಿಂದ ತಾರತಮ್ಯ, ಮಕ್ಕಳ ಹಕ್ಕುಗಳ ಬಗ್ಗೆ ಮಕ್ಕಳಿಗೆ ಅರಿವಿಲ್ಲದೆ ಇರುವುದು, ಗುಣ ಮಟ್ಟದ ಬಿಸಿಯೂಟದ ಕೊರತೆಗಳ ಕುರಿತು ಮಕ್ಕಳು ಚರ್ಚಿಸಿ ಮಂಡಿಸಿದರು.
ನವೆAಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಮಕ್ಕಳ ಸಂಸತ್‌ನಲ್ಲಿ ಭಾಗವಹಿಸಿ ವಿಜಯಪುರ ಜಿಲ್ಲೆಯ ಸಮಸ್ಯೆಗಳ ಕುರಿತು ಚರ್ಚಿಸಲು ವಿಜಯಪುರ ನಗರದ ಸೇಂಟ್ ಜೊಸೆಫ್ ಫ್ರೌಢ ಶಾಲೆಯ ಸ್ಪೂರ್ತಿ ಪೂಜಾರ (೧೦ನೇಯ ತರಗತಿ) ಹಾಗೂ ಕಣಮುಚನಾಳ ಗ್ರಾಮದ ಸರ್ಕಾರಿ ಫ್ರೌಢ ಶಾಲೆಯ ಸೌಜನ್ಯಾ ಹಾಲಳ್ಳಿ (೧೦ನೇ ತರಗತಿ) ಇವರಿರ್ವನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಯಿತು. ಆಯ್ಕೆಯಾದ ಈ ಮಕ್ಕಳಿಗೆ ಕೊನೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಬೆಳಗ್ಗೆ ಕಾರ್ಯಕ್ರಮದ ಪ್ರಾರಂಭದಲ್ಲಿ ಸುನಂದಾ ತೋಳಬಂದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಶವ ಸ್ವಾಗತಿಸಿದರು. ಕಲಾವತಿ ಸುತಾರ ವಂದಿಸಿದರು. ಸುನೀಲ ಚಾಕರೆ ನಿರೂಪಿಸಿದರು. ಕಾರ್ಯಕ್ರಮದ ಯಶಸ್ವಿಗೆ ಉಜ್ವಲ ಸಂಸ್ಥೆಯ ಕಾರ್ಯಕರ್ತರು ಶ್ರಮಿಸಿದರು.