
ಬಾಗಲಕೋಟೆ, ಜೂ10 : ಜಿಲ್ಲೆಯ ಹುನಗುಂದ ಮತ್ತು ಇಲಕಲ್ಲ ತಾಲೂಕಿನ ವಿವಿದೆಡೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ವಿವಿಧ ಕಟ್ಟಡ ಕಾಮಗಾರಿ, ಶಾಲೆ, ಆಸ್ಪತ್ರೆ, ಚರಂಡಿ ನಿರ್ಮಾಣ ಕಾಮಗಾರಿ ಹಾಗೂ ವಸತಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹುನಗುಂದ ತಾಲೂಕಿನ ಹೊನಗನಹಳ್ಳಿ ಗ್ರಾಮದಲ್ಲಿ ನೂತನ ಕಟ್ಟಡ, ಹಿರೇಬಾದವಾಡಗಿ ನೂತನ ಗ್ರಾಮ ಪಂಚಾಯತ ಕಟ್ಟಡ ಕಾಮಗಾರಿ, ಯಡಹಳ್ಳಿ ಗ್ರಾಮದ ಗ್ರಾ.ಪಂ ಕಟ್ಟಡ, ನಾಗೂರ ಗ್ರಾಮದ ಚರಂಡಿ ನಿರ್ಮಾಣ ಕಾಮಗಾರಿ, ಇಲ್ಲಾಳ ಗ್ರಾಮದ ಬಹು ಗ್ರಾಮ ಕುಡಿಯುವ ನೀರಿನ ಘಟಕಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿ ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಬಳಸಿಕೊಂಡು ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು. ನಂತರ ಭೇವಿನಮಟ್ಟ ಗ್ರಾಮದ ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಸಿಇಓ ಅವರು ಶಾಲಾ ಮಕ್ಕಳ ಜೊತೆ ಸಂವಾದ ನಡೆಸಿ ವಿಶ್ವ ಪರಿಸರ ದಿನದ ಪ್ರಯುಕ್ತ ಮಕ್ಕಳೊಂದಿಗೆ ಸಸಿ ನೆಟ್ಟರು.
ಇಲಕಲ್ಲಿನ ಸರಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಹಾಗೂ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಮೂಲ ಸೌಕರ್ಯಗಳಾದ ತರಗತಿ ಕೊಠಡಿ, ಬಾಲಕ, ಬಾಲಕಿಯರ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಇತರೆ ಸೌಕರ್ಯಗಳ ಪರಿಶೀಲಿಸಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲು ಸೂಚನೆ ನೀಡಿದರು. ನಂತರ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿ ನಿಲಯಗಳಲ್ಲಿ ಕುಂದು ಕೊರತೆ ಬಗ್ಗೆ ಚರ್ಚಿ ನಡೆಸಿದರು. ಮದ್ಯಾಹ್ನದ ಬಿಸಿ ಊಟ ಯೋಜನೆಯಡಿ ಮಕ್ಕಳಿಗೆ ನೀಡುತ್ತಿರುವ ಆಹಾರ ಉತ್ತಮ ಗುಣಮಟ್ಟ ಹಾಗೂ ಶುಚಿತ್ವದಿಂದ ಕೂಡಿರಬೇಕು ಎಂದರು.
ಅಲ್ಲದೇ ಇಲಕಲ್ಲ ತಾಲೂಕಾ ಆಸ್ಪತ್ರೆಗೆ ಭೇಟಿ ನೀಡಿದ ಸಿಇಓ ಕುರೇರ ಅವರು ಕೋವಿಡ್ ಕುರಿತು ಮುಂಜಾಗ್ರತೆಯಾಗಿ ಕೈಗೊಂಡ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿರುವ ರೋಗಿಗಳ ಆರೋಗ್ಯವನ್ನು ವಿಚಾರಿಸಿದರು. ಇಲಕಲ್ಲ ಡಯಟರ್ ಹಾಗೂ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ಪಾಲಕರ ಸಭೆಯಲ್ಲಿ ಪಾಲ್ಗೊಂಡು ಮಕ್ಕಳೊಂದಿಗೆ ಸಸಿಗಳನ್ನು ನೆಟ್ಟರು.
ಭೇಟಿ ಸಮಯದಲ್ಲಿ ಪಂಚಾಯತ ರಾಜ್ ಇಂಜಿನೀಯರ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಮಲ್ಲನಗೌಡ ಬಿರಾದಾರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೆ.ಡಿ.ನಾಯ್ಕ, ಕಾರ್ಯನಿರ್ವಾಹಕ ಅಭಿಯಂತರ ಸೋಮು ಅಂಟರದಾಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.