ಕಲಬುರಗಿ: ಅ.19:ದೀಪಗಳು ಬೆಳಕನ್ನು ನೀಡಿ ಹೊರಗಿನ ಕತ್ತಲೆಯನ್ನು ಕಳೆಯುತ್ತವೆ. ಬಸವಾದಿ ಶರಣರು ರಚಿಸಿರುವ ವಚನಗಳನ್ನು ಅಧ್ಯಯನ ಮಾಡಿ, ಅದರ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅಜ್ಞಾನ, ಮೌಢ್ಯತೆ, ಕಂದಾಚಾರ, ಅಂಧಶೃದ್ಧೆ, ಶೋಷಣೆ, ಅಸಮಾನತೆ ಭಾವನೆ ಎಂಬ ಆಂತರಿಕ ಕತ್ತಲೆ ದೂರವಾಗಿ ಬದುಕು ಸುಂದರವಾಗುತ್ತದೆ. ವಚನಗಳು ಸಾಮಾಜಿಕ ಪರಿವರ್ತನೆಯ ಶಕ್ತಿಯುತ ಸಂವಹನ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಶರಣ ಚಿಂತಕ ರವೀಂದ್ರ ಶಾಬಾದಿ ಅಭಿಮತಪಟ್ಟರು.
ನಗರದ ಶಹಾಬಜಾರ ಮಹಾದೇವ ನಗರದಲ್ಲಿನ ‘ಸ್ವಾತಿ ಪ್ರೌಢಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಏರ್ಪಡಿಸಿದ್ದ ‘ವಚನ-ದೀಪೋತ್ಸವ ವಿಶೇಷ ವಿಶೇಷ ಕಾರ್ಯಕ್ರಮ’ದಲ್ಲಿ ವಿದ್ಯಾರ್ಥಿಗಳಿಗೆ ವಚನಗಳ ಪುಸ್ತಕಗಳನ್ನು ವಿತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ್ ಮಾತನಾಡಿ, ಮಾನವನ ಜೀವನದ ಸಾರ್ಥಕತೆಗೆ ವಚನಗಳು ಪೂರಕವಾಗಿವೆ. ವಿದ್ಯಾರ್ಥಿ ದಿಸೆಯಿಂದಲೇ ವಚನಗಳನ್ನು ಅಧ್ಯಯನ ಮಾಡಬೇಕು. ವಚನಗಳ ಅಧ್ಯಯನದಿಂದ ಆತ್ಮವಿಶ್ವಾಸ, ಧೈರ್ಯ, ಛಲಗಾರಿಕೆ, ಏಕಾಗ್ರತೆ, ಸೇವಾ ಮನೋಭಾವನೆ, ಸಾಧನಾ ಮಾರ್ಗವನ್ನು ತಿಳಿಸುತ್ತವೆ. ವಚನಗಳಲ್ಲಿ ಜೀವನ, ನೈತಿಕ, ಮಾನವೀಯ ಮೌಲ್ಯಗಳಿವೆ. ಸಮಾನತೆ, ಕಾಯಕ, ದಾಸೋಹ ಪ್ರಜ್ಞೆ ಸಾರುತ್ತವೆ. ಜಗತ್ತಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ನೀಡಿದ ವಿಶ್ವಗುರು ಬಸವಣ್ಣ ಮತ್ತು ಶರಣರ ಕೊಡುಗೆ ಅನನ್ಯವಾಗಿದೆ. ಶರಣ ತತ್ವದಲ್ಲಿ ದೀಪಾವಳಿಯು ವಚನಗಳ ಬೆಳಕನ್ನು ಸಾರುವ ಮತ್ತು ಚನ್ನಬಸವಣ್ಣನವರ ಜಯಂತಿಯ ಆಚರಣೆಯನ್ನು ಹೊಂದಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಾಲೆಯ ಮುಖ್ಯ ಶಿಕ್ಷಕಿ ಸಾಲಿ ಸಂಗೀತಾ, ಶಿಕ್ಷಕಿಯರಾದ ಪ್ರೀಯಾಂಕಾ, ಪ್ರೀತಿ ಜೆ.ಬಿ., ಪ್ರೀತಿ ಆರ್.ಎಸ್., ಶಿಲ್ಪಾ, ಖಮರುನ್ನೀಸ್ ಬೇಗಂ, ವರ್ಷಾರಾಣಿ, ಚಂದ್ರಲೇಖಾ, ಸೇವಕಿಯರಾದ ನಾಗಮ್ಮ, ಸುನಿತಾ ಹಾಗೂ ವಿದ್ಯಾರ್ಥಿಗಳಿದ್ದರು.























