Home ಜಿಲ್ಲೆ ಕಲಬುರಗಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಎಲ್ಲದರಲ್ಲೂ ಅನ್ಯಾಯ

ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಎಲ್ಲದರಲ್ಲೂ ಅನ್ಯಾಯ

ಕಲಬುರಗಿ,ಆ.೩೦: ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಎಲ್ಲದರಲ್ಲೂ ಅನ್ಯಾಯ. ಅನ್ನದಾತರಿಗಂತೂ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕ ಕ ಪ್ರತ್ಯೇಕ ರಾಜ್ಯವೇ ಎಲ್ಲದಕ್ಕೂ ಮದ್ದು ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಅಧ್ಯಕ್ಷ ಎಂ.ಎಸ್ ಪಾಟೀಲ್ ನರಿಬೋಳ ಅವರು ಪತ್ರಿಕಾ ಪ್ರಕಟಣೆಯಲ್ಲಿ ಸರಕಾರಕ್ಕೆ ಎಚ್ಚರಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಅನ್ನದಾತರ ಜೊತೆಗೆ ವರುಣದೇವ ಅಥವಾ ಹಣೆಬರಹವೋ ಯಾಕೋ ಕಳೆದೆರಡು ವರ್ಷಗಳಿಂದ ಕಣ್ಣು ಮುಚ್ಚಾಲೆಯಂತೆ ಆಟ ಆಡುತ್ತಿದೆ.
ಕಳೆದ ವರ್ಷ ಅತಿವೃಷ್ಟಿಯಿಂದ ಸಂಪೂರ್ಣ ಬೆಳೆಗಳು ಹಾನಿಯಾಗಿ ಕೈಕೊಟ್ಟವು.ಈ ವರ್ಷ ಮುಂಗಾರು ಆರಂಭವಾಗಿ ಮೂರು ತಿಂಗಳು ಕಳೆದರೂ ಅನಾವೃಷ್ಟಿಯಿಂದ ಭೀಕರ ಬರಗಾಲದ ಛಾಯೆ ಆವರಿಸಿದೆ.
ಮಾನ್ಸೂನ್ ಆರಂಭದ ಸಮಯದಲ್ಲಿ ಪ್ರತಿವರ್ಷದಂತೆ ಸಾಲ ಸೋಲ ಮಾಡಿ ರೈತರು ಜೂನ್ ಮಾಹೆಯಲ್ಲಿ ಆಕಾಶದಲ್ಲಿ ಓಡುತ್ತಿರುವ ಮೋಡಗಳನ್ನು ನೆಚ್ಚಿಕೊಂಡು ಮುಂಗಾರು ಬಿತ್ತನೆ ಕಾರ್ಯ ಮಾಡಿ ಮುಗಿಸಿದ್ದಾರೆ.
ಅಂದಿನಿAದ ಇಂದಿನವರೆಗೂ ವರುಣನ ಅವಕೃಪೆಗೆ ಬಿತ್ತಿದ ಬೀಜಗಳು ಮೊಳಕೆ ಒಡೆದು ಅಲ್ಲಿಯೇ ರಣ ಬಿಸಿಲು ಹಾಗೂ ಬಿರುಗಾಳಿಗೆ ನರಳಿ ನರಳಿ ಕಮರಿಹೋಗಿವೆ. ಹಳ್ಳ ಕೊಳ್ಳ ಬಾವಿ ಕೆರೆಗಳು ಬತ್ತಿವೆ. ಅನ್ನದಾತನ ಜೀವನಾಡಿಗಳಾದ ಎತ್ತುಗಳು ದನ ಕರುಗಳು ಮೂಕ ಪ್ರಾಣಿಗಳು ಹಕ್ಕಿ ಪಕ್ಷಿಗಳು ಹನಿ ಹನಿ ನೀರಿಗೂ ಹಪಾಹಪಿಸುತ್ತಿವೆ. ಮಳೆ ಬಂದಿದ್ದರೆ ಹಸಿ ಹುಲ್ಲು ಎಲ್ಲೆಂದರಲ್ಲಿ ಯತೇಚ್ಛವಾಗಿ ಬೆಳೆದು ದನ ಕರು ಪ್ರಾಣಿಗಳು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು.ಬರಗಾಲದ ಭೀಕರತೆಯಿಂದ ಪ್ರಾಣಿ ಪಕ್ಷಿಗಳು ತತ್ತರಿಸಿವೆ .
ಜೊತೆಗೆ ಕೃಷಿಯನ್ನೇ ಅವಲಂಬಿಸಿ ಬದುಕುವ ಹಾಗೂ ಈ ಜಿಲ್ಲೆಯ ಆರ್ಥಿಕ ಬೆಳೆಯಾದ ತೊಗರಿ ನೆಲ ಕಚ್ಚಿಕೊಂಡು ನಿಂತಿದೆ.ಲಕ್ಷ ಲಕ್ಷ ಖರ್ಚು ಮಾಡಿ ತೋಟಗಾರಿಕೆಯ ಆರ್ಥಿಕ ಬೆಳೆಗಳಾದ ಕಬ್ಬು ಬಾಳೆ.ನಿಂಬೆ ಹಾಗೂ ಹಣ್ಣು ಹಂಪಲಿನ ಫಸಲು ಸಂಪೂರ್ಣ ನೀರಿನ ಕೊರತೆಯಿಂದ ಒಣಗಿವೆ.ಒಣ ಬೇಸಾಯಗಾರರ ರೈತರ ರೊಕ್ಕದ ಬೆಳೆಗಳಾದ ಎಳ್ಳು, ಹೆಸರು,ಉದ್ದು ಸೋಯಾಬಿನ್ ,ಹತ್ತಿ ಮುಂತಾದ ಮುಂಗಾರು ಬೆಳೆಗಳನ್ನು ನಂಬಿ ಅನ್ನದಾತರು ಬೇಸಾಯ ಉತ್ತಿ ಬಿತ್ತಿ ಬೆಳೆದು ತಮ್ಮ ವರ್ಷದ ಕೃಷಿ ಚಟುವಟಿಕೆಗಳಿಗೆ ಹಾಗೂ ಕುಟುಂಬದ ಮೂಲ ಆದಾಯ ಹಾಗೂ ಬಹುತೇಕಡಿ ಎಲ್ಲಾ ಚಟುವಟಿಕೆಗಳು ಇವುಗಳನ್ನೇ ಅವಲಂಬಿಸಿವೆ.
ಕೇAದ್ರ ಹಾಗೂ ರಾಜ್ಯದಲ್ಲಿ ಆಡಳಿತದಲ್ಲಿರುವ ಸರಕಾರಗಳು ಕಲ್ಯಾಣ ಕರ್ನಾಟಕ ಭಾಗವನ್ನು ನಿರಂತರವಾಗಿ ನಿರ್ಲಕ್ಷಿಸಿ ಈ ಭಾಗದ ಬಹುತೇಕ ರಂಗಗಳಿಗೆ ಅನ್ಯಾಯ ಅಸಮಾನತೆಯ ಮಲತಾಯಿ ಧೋರಣೆ ಮಾಡುತ್ತ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎರಚುತ್ತಲೇ ಬರುತ್ತಿವೆ.
ಶಿಕ್ಷಣ ,ಉದ್ಯೋಗ, ಉದ್ಯಮ,ಕೈಗಾರಿಕೆ, ನಿರಾವರಿ,ಸರಕಾರಿ ನೌಕರರ ಬಡ್ತಿ,ಕಲೆ ಸಾಹಿತ್ಯ ಅಕಾಡೆಮಿ ಇನ್ನಿತರ ರಂಗಗಳ ಜೊತೆಗೆ ಹಾಗೂ ವಿಶೇಷವಾಗಿ ದೇಶದ ಬೆನ್ನೆಲುಬು ಎಂದು ಕರೆಯುವ ನಾಡಿಗೆ ಅನ್ನ ನೀಡುವ ಅನ್ನದಾತನ ವಿಷಯದಲ್ಲೂ ಸರಕಾರ ದಿವ್ಯ ನಿರ್ಲಕ್ಷ್ಯ ವಹಿಸಿ, ಬಿಸಿಲ ನಾಡಿನ ಅನ್ನದಾತರ ಬದುಕಿನ ಹಾಗೂ ಆತ್ಮಹತ್ಯೆಗಳಂತಹ ಗಂಭೀರ ಸಮಸ್ಯೆಗಳ ಜೊತೆಗೆ ಚೆಲ್ಲಾಟವಾಡುತ್ತಿರುವುದು ಅತ್ಯಂತ ಖಂಡನೀಯವಾಗಿದೆ.
ಈ ಭಾಗದ ರೈತರು ಮಳೆಯನ್ನೇ ಅವಲಂಬಿಸಿ ಕೃಷಿಯನ್ನೇ ತಮ್ಮ ಉಸಿರಾಗಿಸಿಕೊಂಡು. ಜೊತೆಗೆ ನಾಡಿನ ಪ್ರತಿಶತ ೨೫ ಎಸ್ ಟಿ ಯನ್ನು ಅತ್ಯಂತ ಪ್ರಾಮಾಣಿಕ ಹಾಗೂ ಪಾರದರ್ಶಕದಿಂದ ನಾಡಿಗೆ ಈ ಭಾಗದ ಪ್ರಜೆಗಳು ನೀಡುತ್ತಾ ಬಂದಿದ್ದಾರೆ.
ಆದರೆ ದುರ್ದೈವ ಸಂಗತಿ ಎಂದರೆ ಎಲ್ಲಾ ಕ್ಷೇತ್ರಗಳಲ್ಲೂ ಈ ಭಾಗವನ್ನು ಕಡೆಗಣಿಸುತ್ತಲೇ ಬರುತ್ತಿದ್ದಾರೆ.
ಈ ಸರಕಾರಕ್ಕೆ ರೈತರ ಬಗ್ಗೆ ಹಾಗೂ ಕಲ್ಯಾಣ ನಾಡಿನ ಹೃದಯ ಭಾಗವಾದ ಕಲಬುರಗಿ ಬಗ್ಗೆ ನಿಮಗೆ ಕಿಂಚಿತ್ತು ಕಾಳಜಿ ಕಳಕಳಿ ಇದ್ದರೆ, ತುರ್ತಾಗಿ ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕುಗಳು ಬರ ಪೀಡಿತ ಪ್ರದೇಶವೆಂದು ಘೋಷಿಸಿ, ರಾಷ್ಟ್ರೀಯ ವಿಪತ್ತು ಬರಗಾಲ ನಿರ್ವಹಣೆಯಯಂತೆ ತುರ್ತು ಕ್ರಮಗಳನ್ನು ಕೈಕೊಂಡು ರೈತಾಪಿ ವರ್ಗಕ್ಕೆ ಸಹಾಯ ಮಾಡಬೇಕು.
ಪ್ರತಿ ಎಕರೆಗೆ ೫೦ ಸಾವಿರ ರೂ ಪರಿಹಾರ ಘೋಷಿಸಬೇಕು ಹಾಗೂ ರೈತರ ರಾಷ್ಟ್ರೀಕೃತ ಬ್ಯಾಂಕುಗಳ ಸಾಲವನ್ನು ಸಂಪೂರ್ಣ ಮನ್ನಮಾಡಬೇಕು. ಹಾಗೂ ಹಿಂದಿನ ವರ್ಷದ ಬೆಳೆ ಪರಿಹಾರವನ್ನು ಸಿಗದ ರೈತರಿಗೆ ತುರ್ತಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾವಾಗಬೇಕು.ಇವೆಲ್ಲಾ ಕರ್ನಾಟಕ ಸರಕಾರ ತುರ್ತಾಗಿ ಕ್ರಮ ಕೈಗೊಳ್ಳಬೇಕು.
ಇಲ್ಲದಿದ್ದರೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ನೇತೃತ್ವದಲ್ಲಿ ಈ ಭಾಗದ ವಿವಿಧ ಧರ್ಮದ ಪೂಜ್ಯ ಮಠಾಧೀಶರು ರೈತಪರ ಸಂಘಟನೆಗಳು, ಬಹುಜನ ಸಮಾಜ ಪಾರ್ಟಿ ಶ್ರೀರಾಮ ಸೇನೆ ರಾಮಸೇನೆ ಜನಪರ ಸಂಘಟನೆಗಳು, ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಬುದ್ದಿಜೀವಿಗಳು, ಪ್ರಗತಿಪರರು ಸಾಮಾಜಿಕ ಹೋರಾಟಗಾರರು ಮುಂತಾದ ಪ್ರಮುಖ ಸಂಘಟನೆಗಳ ಸಹಯೋಗದೊಂದಿಗೆ ಉಗ್ರಸ್ವರೂಪದ ಹೋರಾಟ ಕೈಕೊಳ್ಳಬೇಕಾಗುತ್ತದೆ ಎಂದು ಎಂ ಎಸ್ ಪಾಟೀಲ್ ನರಿಬೋಳ ಅವರು ಸರಕಾರಕ್ಕೆ ಎಚ್ಚರಿಸಿದ್ದಾರೆ.