Home ಜಿಲ್ಲೆ ಜಮಖಂಡಿ ಉಪ ಕಾರಾಗೃಹದಲ್ಲಿ ಅಮಾನವೀಯ ಸ್ಥಿತಿ!ಕೈದಿಗಳ ಸಂಬಂಧಿಕರಿಗೆ ಕುಡಿಯುವ ನೀರಿಲ್ಲ, ನೆರಳೂ ಇಲ್ಲ!

ಜಮಖಂಡಿ ಉಪ ಕಾರಾಗೃಹದಲ್ಲಿ ಅಮಾನವೀಯ ಸ್ಥಿತಿ!ಕೈದಿಗಳ ಸಂಬಂಧಿಕರಿಗೆ ಕುಡಿಯುವ ನೀರಿಲ್ಲ, ನೆರಳೂ ಇಲ್ಲ!

ಜಮಖಂಡಿ:ಜಮಖಂಡಿ ಉಪ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳನ್ನು ಭೇಟಿಯಾಗಲು ಬರುವ ಸಂಬಂಧಿಕರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳೂ ಇಲ್ಲವೇ? ಕುಡಿಯುವ ನೀರಿನ ವ್ಯವಸ್ಥೆಯಿಲ್ಲ, ಕುಳಿತುಕೊಳ್ಳಲು ನೆರಳಿನ ವ್ಯವಸ್ಥೆಯಿಲ್ಲ! ಗಂಟೆಗಟ್ಟಲೆ ಬಿಸಿಲಿನಲ್ಲಿ ಕುಳಿತು ಕಾಯಬೇಕಾದ ದುಸ್ಥಿತಿ ಎದುರಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ತಮ್ಮ ಕುಟುಂಬದ ಸದಸ್ಯರನ್ನು ಭೇಟಿಯಾಗಲು ದೂರದ ಊರುಗಳಿಂದ ಬರುವ ಸಂಬಂಧಿಕರು, ಮಹಿಳೆಯರು, ವೃದ್ಧರು ಬಿಸಿಲಿನ ತಾಪಕ್ಕೆ ತುತ್ತಾಗಿ ಪರದಾಡುವಂತಾಗಿದೆ. ಕೈದಿಗಳನ್ನು ಭೇಟಿಯಾಗಲು ಬರುವ ಜನರಿಗೆ ಕುಡಿಯುವ ನೀರು ಹಾಗೂ ನೆರಳಿನ ವ್ಯವಸ್ಥೆ ಕಲ್ಪಿಸುವುದು ಇಷ್ಟೊಂದು ಕಷ್ಟವೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಕಾರಾಗೃಹಕ್ಕೆ ಕೈದಿಗಳನ್ನು ಭೇಟಿಯಾಗಲು ಬರುವವರು ಮನುಷ್ಯರಲ್ಲವೇ? ಅವರಿಗೆ ಕನಿಷ್ಠ ಕುಡಿಯುವ ನೀರು ಮತ್ತು ನೆರಳಿನ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿ ಯಾರದ್ದು? ಎಂಬ ಪ್ರಶ್ನೆ ಇದೀಗ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಕಾರಾಗೃಹದ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಕೇವಲ ಆಡಳಿತ ನಡೆಸುವುದಷ್ಟೇ ಅಲ್ಲ, ಸಾರ್ವಜನಿಕರಿಗೆ ಕನಿಷ್ಠ ಮಾನವೀಯ ಸೌಲಭ್ಯಗಳನ್ನು ಒದಗಿಸುವುದೂ ಆಡಳಿತದ ಜವಾಬ್ದಾರಿಯಾಗಿದೆ.

ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ!

ಜಮಖಂಡಿ ಉಪ ಕಾರಾಗೃಹದಲ್ಲಿ ಕೈದಿಗಳನ್ನು ಭೇಟಿಯಾಗಲು ಬರುವ ಸಂಬಂಧಿಕರಿಗೆ ತಕ್ಷಣ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಆಸನ ವ್ಯವಸ್ಥೆ ಹಾಗೂ ಸೂಕ್ತ ಕಾಯುವ ಸ್ಥಳ ಕಲ್ಪಿಸಬೇಕು. ಜನರು ಗಂಟೆಗಟ್ಟಲೆ ಬಿಸಿಲಿನಲ್ಲಿ ನಿಂತು ಅಥವಾ ಕುಳಿತು ಸಂಕಷ್ಟ ಅನುಭವಿಸುವ ಪರಿಸ್ಥಿತಿಗೆ ಶಾಶ್ವತ ಪರಿಹಾರ ಒದಗಿಸಬೇಕು.

ಜನರ ಸಂಕಷ್ಟಕ್ಕೆ ಸ್ಪಂದಿಸುವವರು ಯಾರು? ಸಂಬಂಧಪಟ್ಟ ಅಧಿಕಾರಿಗಳು ಯಾವಾಗ ಎಚ್ಚೆತ್ತುಕೊಳ್ಳುತ್ತಾರೆ? ಎಂಬುದಕ್ಕೆ ಉತ್ತರ ಸಿಗಬೇಕಿದೆ.